ಬೆಂಗಳೂರು : ನಾಳೆಯಿಂದ ಐದು ಕೆಜಿ ಅಕ್ಕಿ ಕೊಡಿ ಅಂತ ಪತ್ರ ಚಳವಳಿ ಮಾಡುತ್ತೇವೆ. ರಾಜ್ಯದ ಎಲ್ಲ ಜನರು ಸಿಎಂಗೆ ಪತ್ರ ಬರೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದಲ್ಲಿ ಯಾವ ರೀತಿ ಸಹಾಯ ಮಾಡಬೇಕು ಎಂಬ ಬಗ್ಗೆ ಇಂದು ಸಮಾಲೋಚನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ನಿನ್ನೆಯ ಸಭೆ ಮುಂದುವರಿಸಿ, ಜಿಲ್ಲಾಧ್ಯಕ್ಷರು ಹಾಗೂ ಶಾಸಕರ ಜೊತೆ ಸಭೆ ಮಾಡಿದ್ದೇವೆ. ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ಕೊಡಿ. ಎಲ್ಲ ಕೆಲಸ ನಿಲ್ಲಿಸಿ ಜನರಿಗೆ ಸಹಾಯ ಮಾಡಿ ಅಂತ ಕೇಳುತ್ತಿರುವಾಗ, ಒಬ್ಬ ಸಚಿವ ಸಾಯಿ ಅಂತ ಹೇಳ್ತಾರೆ.
ಅದು ಅವರ ಹೇಳಿಕೆಯಲ್ಲ, ಬಿಜೆಪಿ ಮನಸ್ಥಿತಿ. ಇದರ ಬಗ್ಗೆ ಬಿಜೆಪಿ ಅಧ್ಯಕ್ಷ, ಸಿಎಂ ಮಾತನಾಡಬೇಕು. ಬೇರೆ ಯಾರೂ ಸಮರ್ಥನೆ ಮಾಡುವುದು ಬೇಡ ಎಂದರು.
ನಾಳೆಯಿಂದ ಐದು ಕೆಜಿ ಅಕ್ಕಿ ಕೊಡಿ ಅಂತ ಪತ್ರ ಚಳವಳಿ ಮಾಡುತ್ತೇವೆ. ರಾಜ್ಯದ ಎಲ್ಲ ಜನರು ಸಿಎಂಗೆ ಪತ್ರ ಬರೆಯಬೇಕು. ಬಿಪಿಎಲ್ ಕಾರ್ಡ್ ಇರುವವರು ಈ ಅಭಿಯಾನದಲ್ಲಿ ಭಾಗಿಯಾಗಿ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ, ಅದನ್ನು ಸಿಎಂಗೆ ಕಳುಹಿಸಿ ಕೊಡಿ. ಸಿಎಂಗೆ ಅಕ್ಕಿ ಕೊಡಿ ಅಂತ ಮನವಿ ಮಾಡಿ. ಜನರ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಇಂದು ಸಹ ಜೂಮ್ ಮೂಲಕ ಮೀಟಿಂಗ್ ನಡೆಸಿದ್ದೇವೆ. ಜಿಲ್ಲಾ ಮತ್ತು ರಾಷ್ಟ್ರದ ಮಟ್ಟದ ನಾಯಕರು ಭಾಗವಹಿಸಿದ್ದರು. ಮೀಟಿಂಗ್ನಲ್ಲಿ ಕಾಂಗ್ರೆಸ್ ಶಾಸಕರು, ಎಂಎಲ್ಸಿ ಮತ್ತು ಪಕ್ಷದ ನಾಯಕರು ಭಾಗವಹಿಸಿದ್ದರು.
ಕಾಂಗ್ರೆಸ್ ಜನರಿಗೆ ಯಾವ ರೀತಿ ಸಹಾಯ ಮಾಡಬೇಕು ಅಂತ ಚರ್ಚೆ ಮಾಡಲಾಗಿದೆ. ನಾವು 10 ಕೆಜಿ ಅಕ್ಕಿ ಜನರಿಗೆ ಕೊಡಿ ಅಂತ ಕೇಳ್ತಾಯಿದ್ದೀವಿ. ಇದೇ ಸಂದರ್ಭದಲ್ಲಿ ರೈತನೊಬ್ಬ ಫುಡ್ ಮಿನಿಸ್ಟರ್‌ಗೆ ಪೋನ್ ಮಾಡಿ.
ನಾವು ಸಾಯಿಬೇಕಾ? ಬದುಕಬೇಕಾ? ಅಂತ ಕೇಳಿದ್ರೆ, ಸಾಯಿ ಅಂತ ಹೇಳ್ತಾರೆ. ಕತ್ತಿ ಹಿರಿಯ ಸಚಿವ, ಅವರ ಹೇಳಿಕೆಗೆ ಈಗ ಸಿಎಂ ಯಡಿಯೂರಪ್ಪ ಉತ್ತರ ಕೊಡಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರು ಉತ್ತರ ಕೊಡಬೇಕು ಎಂದರು.
ಇವತ್ತು ಹದಿನೆಂಟು ವರ್ಷದ ಎಲ್ಲರೂ ಲಸಿಕೆ ಅಭಿಯಾನ ಅಂತಾರೆ. ಆನ್ಲೈನ್ ಮುಖಾಂತರ ನೋಂದಣಿ ಮಾಡಿಕೊಳ್ಳಲು ಹೇಳ್ತಾರೆ. ಹಳ್ಳಿ ಜನರು ಹೇಗೆ ನೋಂದಣಿ ಮಾಡಿಕೊಳ್ತಾರೆ. ಬೇರೆ ರಾಜ್ಯಗಳಲ್ಲಿ ಉಚಿತ ಲಸಿಕೆ ಕೊಡುತ್ತಿದ್ದಾರೆ.
ಕಾಡುಗಳಲ್ಲಿ ವಾಸ ಮಾಡುತ್ತಿರುವವರಿಗೆ ಹೆಲಿಕಾಪ್ಟರ್ ಮೂಲಕ ಲಸಿಕೆ ಕೊಡುತ್ತಿದ್ದಾರೆ. ಆದರೆ, ನಮ್ಮಲ್ಲಿ ಲಸಿಕೆ ತೆಗೆದುಕೊಳ್ಳೋಕೆ ಆನ್ಲೈನ್ ರಿಜಿಸ್ಟರ್ ಮಾಡಿಕೊಳ್ಳೋಕೆ ಹೇಳ್ತಾರೆ. ಎಲ್ಲ ಲಸಿಕೆ ಜಾಹೀರಾತಿಗೂ ಮೋದಿ ಫೋಟೊ ಹಾಕ್ತಾರೆ.
ಆದರೆ, ಕೊರೊನಾ ವಿಚಾರದಲ್ಲಿ ರಾಜಕೀಯ ಬೇಡ ಅಂತಾರೆ. ಇದು ರಾಜಕೀಯ ಅಲ್ವ? ಎಂದ ಅವರು, ಕೊರೊನಾ ಬಂದು ಜನರು ಸಾಯ್ತಾ ಇದ್ದಾರೆ. ನನ್ನ ಕ್ಷೇತ್ರದಲ್ಲಿ ಎಷ್ಟು ಜನರು ಸತ್ತಿದ್ದಾರೆ ಅಂತ ಗೊತ್ತು. ಸರ್ಕಾರ ಸರಿಯಾದ ಮಾಹಿತಿ ಕೊಡುತ್ತಿಲ್ಲ ಎಂದು ಹೇಳಿದರು.
ಓದಿ: ಅಲ್ಲೇ ಸಿದ್ದರಾಮಯ್ಯ ಮನೆಯಲ್ಲೇ ಶವ ಹೂಳಲಿ.. ಅವನ್ಯಾರು ಡಿಕೆಶಿ ನನ್ನ ರಾಜೀನಾಮೆ ಕೇಳೋಕೆ.. ಕತ್ತಿ ಕಿಡಿ