ಬೆಂಗಳೂರು: ವಿಧಾನ ಪರಿಷತ್ಗೆ ಘೋಷಣೆಯಾಗಿರುವ 25 ಸ್ಥಾನಗಳು ಹಾಗೂ 4 ಶಿಕ್ಷಕರ ಮತ್ತ ಪದವೀಧರರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಎಂದು ಮಾತುಕತೆ ನಡೆಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಸಂಸದೀಯ ಮಂಡಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೋರ್ ಕಮಿಟಿ ಸಭೆ ನಂತರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆ ಕುರಿತು ಕೋರ್ ಕಮಿಟಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ. ಪ್ರತಿ ಜಿಲ್ಲೆಗಳಿಂದ ಬಂದಿದ್ದ ವರದಿಯನ್ನು ಅವಲೋಕನ ಮಾಡಲಾಗಿದೆ. ಮತ್ತೊಮ್ಮೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಪ್ರತಿ ಜಿಲ್ಲೆಯಿಂದಲೂ ಪ್ರತಿ ಕ್ಷೇತ್ರದಿಂದಲೂ ಎರಡು ಮೂರು ಹೆಸರುಗಳನ್ನು ಅಂತಿಮಗೊಳಿಸಿ ಇನ್ನೆರಡು ದಿನಗಳಲ್ಲಿ ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗುತ್ತದೆ. ಸಂಸದೀಯ ಮಂಡಳಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ನವೆಂಬರ್ 18 ರಿಂದ 4 ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಕೋರ್ ಕಮಿಟಿಯಲ್ಲಿ ಒಪ್ಪಿಗೆ ನೀಡಲಾಗಿದೆ. ಬೇರೆ ಪಕ್ಷದಿಂದ ಪರಿಷತ್ ಸದಸ್ಯರು ಬಿಜೆಪಿ ಸೇರಿ ಟಿಕೆಟ್ ಪಡೆಯುವ ಅಪೇಕ್ಷೆ ವ್ಯಕ್ತಪಡಿಸಿರುವ ಕುರಿತು ಚರ್ಚಿಸಲಾಗಿದೆ. ಆದರೆ, ಅದರ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು.