ಬೆಂಗಳೂರು: ನಿಜವಾಗಿ ಬೆಂಗಳೂರು ನೆರೆಗೆ ಮೂಲ ಪುರುಷರು ಯಾರು?, ಯಾವ ಸರ್ಕಾರ, ಯಾವ ಸಚಿವರು ಎಂಬ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಅತಿವೃಷ್ಟಿ ಕುರಿತ ಚರ್ಚೆಗೆ ಇವತ್ತು ಮತ್ತು ನಾಳೆ ಉತ್ತರ ಕೊಡುತ್ತೇನೆ. ಕಂದಾಯ ಸಚಿವನಾಗಿ, ರಾಜ್ಯ ವಿಪತ್ತು ನಿರ್ವಹಣಾ ಮುಖ್ಯಸ್ಥನಾಗಿ ದಾಖಲೆ ಬಿಡುಗಡೆ ಮಾಡುತ್ತೇನೆ. ಆ ಸಂದರ್ಭದಲ್ಲಿ ಇಡೀ ರಾಜ್ಯ, ವಿಶೇಷವಾಗಿ ಬೆಂಗಳೂರು ನೆರೆ ಆಗಲು ಮೂಲ ಕಾರಣ ಯಾರು?. ಸರಿಯಾದ ತೀರ್ಮಾನ ಮಾಡದೆ, ಬಹಳಷ್ಟು ಅಕ್ರಮ ಮಾಡಿದ್ದರಿಂದ, ಅಧಿಕಾರಿಗಳ ಮೇಲೆ ಒತ್ತಡ ಹಾಕಿದ ಪರಿಣಾಮ ಕರೆಗಳನ್ನು ಮುಚ್ಚಿದರಿಂದ ಈ ರೀತಿ ಪರಿಸ್ಥಿತಿ ಬೆಂಗಳೂರಿಗೆ ಬಂದಿದೆ ಎಂದರು.
ಯಾವ ಕಾಲದಲ್ಲಿ, ಯಾರ ಸರ್ಕಾರ, ಯಾವ ಸಚಿವರು, ಅಧಿಕಾರಿಗಳು, ಮುಖ್ಯಮಂತ್ರಿಗಳು ಅನುಮೋದನೆ ಕೊಟ್ಟಿದ್ದಾರೆ ಎಂಬ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ದಾಖಲೆ ಬಿಡುಗಡೆ ಮಾಡಿ ಸತ್ಯಾಸತ್ಯತೆಯನ್ನು ಜನರ ಮುಂದೆ ಇಡುತ್ತೇನೆ. ಬೊಮ್ಮಾಯಿ ತಪ್ಪು ಮಾಡಿದ್ದಾರಾ?. ಬೇರೆ ಸರ್ಕಾರಗಳು ತಪ್ಪು ಮಾಡಿದ್ದಾರಾ ಎಂಬುದು ಗೊತ್ತಾಗಲಿದೆ. ಈ ಸಂಬಂಧ ಇವತ್ತು ಸ್ವೀಕರ್ ಬಳಿ ಚರ್ಚೆ ಮಾಡುತ್ತೇನೆ. ಸಮಯ ನಿಗದಿ ಮಾಡುತ್ತೇನೆ ಎಂದು ಹೇಳಿದರು.
ಇತ್ತೀಚೆಗೆ ಬೆಂಗಳೂರಿನ ಕೆಲವೆಡೆ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಆ ಬಳಿಕ ಎಚ್ಚೆತ್ತ ಸರ್ಕಾರ ರಾಜಕಾಲುವೆ ಒತ್ತುವರಿದಾರರಿಗೆ ಶಾಕ್ ನೀಡುತ್ತಿದೆ.
(ಇದನ್ನೂ ಓದಿ: ಸಂಪುಟ ವಿಸ್ತರಣೆ ವಿಳಂಬ: ಬೊಮ್ಮಾಯಿ ಬಳಿಯೇ ಉಳಿದ ಪ್ರಮುಖ ಖಾತೆಗಳು, ಅತೃಪ್ತರ ಕೆಂಗಣ್ಣು)