ಬೆಂಗಳೂರು: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು. ಒಂದು ವೇಳೆ ಜನಾಭಿಪ್ರಾಯ ಪಡೆಯದೇ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡರೆ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 16 ರಾಷ್ಟ್ರಗಳ ಮಧ್ಯೆ ಮುಕ್ತ ಮಾರುಕಟ್ಟೆ ಒಪ್ಪಂದ ನಡೆಯುತ್ತಿದೆ. ಇದರಿಂದ ಸೇವೆ, ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಹಾಲು ಉತ್ಪನ್ನಗಳ ಮೇಲೆ ಈ ಒಪ್ಪಂದ ಪರಿಣಾಮ ಬೀರಲಿದೆ. ಭಾರತ ಒಂದು ದೊಡ್ಡ ಮಾರುಕಟ್ಟೆಯಾಗಿದ್ದು, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾದ ಹಾಲು ಉತ್ಪನ್ನಗಳಿಗೆ ಭಾರತ ದೊಡ್ಡ ಮಾರುಕಟ್ಟೆ ಒದಗಿಸಲಿದೆ ಎಂದರು.
ಈ ಒಪ್ಪಂದ ಜಾರಿಯಾದ್ರೆ ಆಮದು ಮತ್ತಷ್ಟು ಜಾಸ್ತಿ ಆಗುತ್ತದೆ. ಭಾರತ ಹಾಲು ಉತ್ಪಾದನೆಯಲ್ಲಿ ನಂ.1 ಸ್ಥಾನದಲ್ಲಿದೆ. ಕರ್ನಾಟಕ ದೇಶದ ಹಾಲು ಉತ್ಪಾದನೆಯಲ್ಲಿ ನಂ. 2 ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 15,000 ಹಾಲು ಉತ್ಪಾದನಾ ಸೊಸೈಟಿಗಳಿವೆ. 25 ಲಕ್ಷ ಮಂದಿ ಸದಸ್ಯರಿದ್ದಾರೆ. ನಾವು ಪ್ರತಿದಿನ ಸುಮಾರು 78 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ರಾಜ್ಯದಲ್ಲಿ 52% ಕೃಷಿ ಕಾರ್ಮಿಕರಿದ್ದಾರೆ. ಹೈನುಗಾರಿಕೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಮುಕ್ತ ಮಾರುಕಟ್ಟೆ ಒಪ್ಪಂದಕ್ಕೆ ಸಹಿ ಹಾಕಿದರೆ, 99% ಸಾಂಬಾರು ಪದಾರ್ಥ, ಕೃಷಿ ಉತ್ಪನ್ನ, ಹಾಲು ಉತ್ಪನ್ನಗಳಿಗೆ ಆಮದು ಸುಂಕ ಇರುವುದಿಲ್ಲ. ಇದರಿಂದ ಉತ್ಪನ್ನಗಳು ಅಗ್ಗದಲ್ಲಿ ಸಿಗಲಿದೆ. ಇದರಿಂದ ರಾಜ್ಯದ 1.50 ಕೋಟಿ ಹಾಲು ಉತ್ಪಾದಕರ ಮೇಲೆ ದುಷ್ಪರಿಣಾಮ ಬೀರಲಿದೆ. ದೇಶದಲ್ಲಿ ಸುಮಾರು 10 ಕೋಟಿ ಹಾಲು ಉತ್ಪಾದಕರು ಬೀದಿಗೆ ಬೀಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಕ್ಷೇತ್ರದಲ್ಲಿ ಹಿಂದುಳಿದವರು, ಮಹಿಳೆಯರು ಅವಲಂಬಿತರಾಗಿದ್ದಾರೆ. ಬಹಳ ಗೌಪ್ಯವಾಗಿ ಈ ಒಪ್ಪಂದವನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಇದನ್ನು ಬಹಿರಂಗವಾಗಿ ಚರ್ಚೆ ಮಾಡಿ, ಅಭಿಪ್ರಾಯ ಸಂಗ್ರಹಿಸಿ ಬಳಿಕ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದರೆ ಜನರಿಗೆ ದ್ರೋಹ ಮಾಡಿದಂತಾಗುತ್ತದೆ ಎಂದು ಹೇಳಿದ್ರು.
ರಾಜ್ಯದಲ್ಲಿ 14 ಹಾಲು ಉತ್ಪಾದಕರ ಯೂನಿಯನ್ ಇದೆ. ನ.4ಕ್ಕೆ ಒಂದು ವೇಳೆ ಕೇಂದ್ರ ಸರ್ಕಾರ ಆರ್ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ)ಗೆ ಸಹಿ ಹಾಕಿದರೆ, ನಾವು ತೀವ್ರವಾದ ಹೋರಾಟ ಮಾಡುತ್ತೇವೆ. ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಬಾರದು. ಇದು ಜನರಿಗೆ ಮಾಡುವ ದ್ರೋಹ ಮತ್ತು ಗದಾಪ್ರಹಾರವಾಗಲಿದೆ ಎಂದು ಕಿಡಿಕಾರಿದರು.
ಸಿಎಂ ಯಡಿಯೂರಪ್ಪ ಕೇಂದ್ರಕ್ಕೆ ಈ ಸಂಬಂಧ ಸರ್ವಪಕ್ಷ ನಿಯೋಗ ಕರೆದೊಯ್ಯಬೇಕು. ಪ್ರತಿಪಕ್ಷಗಳನ್ನು ಕರೆದು ಸಿಎಂ ಸಭೆ ನಡೆಸಬೇಕು, ಪ್ರಧಾನಿಗಳಿಗೆ ಇದರ ದುಷ್ಪರಿಣಾಮ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.