ಬೆಂಗಳೂರು : ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳನ್ನು ಪುನಶ್ಚೇತನಗೊಳಿಸುವ ಸಂಬಂಧ ಸಭೆ ನಡೆಸಿದ್ದೇವೆ. ಸಾರ್ಜಜನಿಕ ಸಾರಿಗೆ ಸೌಲಭ್ಯ ಅಗತ್ಯತೆ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳನ್ನು ಅಭಿವೃದ್ಧಿಪಡಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇದೇ 14 ರಂದು ತಿರುಪತಿಯಲ್ಲಿ ಅಮಿತ್ ಷಾ ಅಧ್ಯಕ್ಷತೆಯಲ್ಲಿ ದಕ್ಷಿಣ ಭಾರತದ ಸಿಎಂಗಳ ಸಭೆ ಇದೆ. ಸಭೆಯಲ್ಲಿ ಹಲವು ಅಂತರ್ ರಾಜ್ಯ ಯೋಜನೆಗಳ ಬಗ್ಗೆ ಚರ್ಚೆಯಾಗಲಿದೆ. 16 ರಂದು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ಮೂಲಭೂತ ಸೌಕರ್ಯಗಳಿಗೆ ಬಂಡವಾಳ ಕುರಿತಂತೆ ಸಿಎಂಗಳ ಸಭೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನರಿಗೆ ಅಗತ್ಯ ಸೇವೆಗಳನ್ನು ನೀಡುವ ಸಂಸ್ಥೆಗಳನ್ನು ಬಲಪಡಿಸಲು ಇಂದು ಎರಡು ಸಭೆ ನಡೆಸಿದೆವು. ಸಭೆಯಲ್ಲಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಇಂದು ಸಮಿತಿ ರಚಿಸಿದ್ದು, ನಿಗಮಗಳ ಪುನಶ್ಚೇತನಕ್ಕೆ ವರದಿ ಸಲ್ಲಿಸುವಂತೆ ಸಮಿತಿಗೆ ಕೇಳಿದ್ದೇವೆ. ಅದೇ ರೀತಿ, ಎಸ್ಕಾಂಗಳ ಆರ್ಥಿಕ ಸ್ಥಿತಿ ಸುಧಾರಣೆಗೆ ನಿವೃತ್ತ ಐಎಎಸ್ ಅಧಿಕಾರಿ ಜೈರಾಜ್ ನೇತೃತ್ವದಲ್ಲಿ ಸಮಿತಿ ಮಾಡಲು ತೀರ್ಮಾನ ಮಾಡಿದ್ದೇವೆ. ಜನರಿಗೆ ಸೇವೆ ನೀಡುವ ಸಂಸ್ಥೆಗಳನ್ನು ಬಲಪಡಿಸಲು ಈ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ಇದೇ ವೇಳೆ ಸಿದ್ದರಾಮಯ ಪತ್ರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ನೆರವು ನೀಡಲು ಸಿದ್ದರಾಮಯ್ಯ ಅವರು ಬರೆದಿರುವ ಪತ್ರ ತಲುಪಿದೆ. ಸದ್ಯದಲ್ಲೇ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಅವರಿಗೆ ವಿವರ ಕೊಡುತ್ತೇವೆ ಎಂದರು.
ಇದನ್ನು ಓದಿ:ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮಠಾಧಿಪತಿಗಳಿಂದ ಒತ್ತಾಯ : ಪರಿಶೀಲಿಸುವುದಾಗಿ ಸಿಎಂ ಭರವಸೆ