ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನ ಸಂಕಲ್ಪ ಮಾಡಿದ್ದಾರೆ. ಈ ರಾಜ್ಯದಲ್ಲಿರುವ ಭ್ರಷ್ಟ ಹಾಗೂ ದುರಾಡಳಿತದಿಂದ ಕೂಡಿರುವ ನಿಷ್ಕ್ರಿಯ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಎಲ್ಲಾ ನಾಯಕರೂ ಒಟ್ಟಾಗಿ ದುಡಿದು ಬಿಜೆಪಿಯ ಭ್ರಷ್ಟ ಸರ್ಕಾರವನ್ನು ಕಿತ್ತೊಗೆದು ಅಧಿಕಾರಕ್ಕೆ ಬಂದರೆ, ನನಗೆ ಸಂತಸವಾಗುತ್ತದೆ ಎಂದು ಖರ್ಗೆ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಕಿತ್ತೊಗೆಯುವುದು ನಮ್ಮ ಸವಾಲು: ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ರಾಜ್ಯದ ಜನತೆಗೆ ಹೆಮ್ಮೆಯಾಗಿದೆ. ಪಕ್ಷದ ಕಾರ್ಯಕರ್ತರಂತೂ ಸಂತಸಗೊಂಡಿದ್ದಾರೆ. ನಾವು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ನಿಮಗೆ ಗೌರವ ಸಲ್ಲಿಸುತ್ತೇವೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಆದರೆ ನಮ್ಮ ಮುಂದಿರುವ ಸವಾಲು ಬಿಜೆಪಿ ಸರ್ಕಾರ ಕಿತ್ತೊಗೆಯಬೇಕು ಎಂಬುದು ಎಂದಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ ಸಿಡಿದೆದ್ದ ಜನ: ಬಡವರ, ರೈತರ, ಯುವಕರ, ಅಲ್ಪಸಂಖ್ಯಾತರ ವಿರೋಧಿ ಸರ್ಕಾರ ಕಿತ್ತೊಗೆಯುವ ಚರ್ಚೆ ನಡೆದಿದೆ. ಅವರು ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. ಈ ಮೂರು ವರ್ಷದಲ್ಲಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ್ದನ್ನು ಬಿಟ್ಟರೆ, ಜನರ ಕಷ್ಟಕ್ಕೆ ಸ್ಪಂಧಿಸುವ ಕಾರ್ಯ ಮಾಡಿಲ್ಲ. 40 ಪರ್ಸೆಂಟ್ ಸರ್ಕಾರ ಎಂದು ನಾವಲ್ಲ, ಗುತ್ತಿಗೆದಾರರ ಸಂಘವೇ ಈ ಮಾತನ್ನು ಹೇಳಿ ಪ್ರಧಾನಿಗೆ ಪತ್ರ ಬರೆದಿದೆ. ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಜನ ಸಿಡಿದೆದ್ದಿದ್ದಾರೆ.
ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಅಭಿವೃದ್ಧಿ ಆಗುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ಇದನ್ನು ಕಿತ್ತೊಗೆಯಲೇಬೇಕು. ರಾಜ್ಯದ ಯಾವ ವರ್ಗದ ಜನರಿಗೂ ರಕ್ಷಣೆ ಇಲ್ಲ. ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ. ದ್ವೇಷದ ರಾಜಕಾರಣ, ನಿರುದ್ಯೋಗ, ಭ್ರಷ್ಟಾಚಾರ, ರೈತರ ಸಮಸ್ಯೆ ಯಾವುದಕ್ಕೂ ಪರಿಹಾರ ಕಲ್ಪಿಸುವ ಕಾರ್ಯ ಆಗುತ್ತಿಲ್ಲ. ಇದರಿಂದಾಗಿಯೇ ನಮ್ಮ ನಾಯಕರಾದ ರಾಹುಲ್ ಗಾಂಧಿ ಪಾದಯಾತ್ರೆ ಆರಂಭಿಸಿದ್ದಾರೆ. ದೇಶಾದ್ಯಂತ ಉತ್ತಮ ಸ್ಪಂದನೆ ಸಿಗುತ್ತಿದೆ. ಇದರಿಂದ ರಾಜ್ಯ ಕಾಂಗ್ರೆಸ್ಗೆ ಮತ್ತಷ್ಟು ಶಕ್ತಿ ಬಂದಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸೇರಿ ಪಕ್ಷದ ನಾಯಕರ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ: ರಮೇಶ್ ಕುಮಾರ್
ಖರ್ಗೆ ಅಭಿವೃದ್ಧಿಪರ ಕಾರ್ಯ ಮಾಡುವ ಅಭಿಲಾಷೆಯೊಂದಿಗೆ ರಾಜಕಾರಣ ಮಾಡಿದವರು. ಶ್ರೀಮಂತರ ಪರ ರಾಜಕಾರಣ ಮಾಡಿಲ್ಲ. ಬಡವರು, ಶೋಷಿತರ ಪರವಾಗಿ ಕೆಲಸ ಮಾಡಿದ್ದೀರಿ. ನಿಮ್ಮ ರಾಜಕಾರಣದ ಉದ್ದಕ್ಕೂ ಸಹ ಒಪ್ಪಿಕೊಂಡ ತತ್ವ, ಸಿದ್ಧಾಂತಕ್ಕೆ ಬದ್ಧವಾಗಿ ಬಾಳಿದ್ದೀರಿ. ವಿಭಿನ್ನ ವ್ಯಕ್ತಿತ್ವ ನಿಮ್ಮದು. ನೀವು ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ನಾಡಿನ ಕಾಂಗ್ರೆಸ್ ನಾಯಕರಿಗೆ ಬಲ ಬಂದಿದೆ. 2023 ರಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂಬ ಭರವಸೆ ನೀಡುತ್ತೇವೆ ಎಂದರು.