ಬೆಂಗಳೂರು: ''ಬಿಜೆಪಿ ಅವಧಿಯಲ್ಲಿ ನಡೆದ ವಿವಿಧ ಅಕ್ರಮ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು'' ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿ ಹಗರಣಗಳ ತನಿಖೆಯ ವಿಚಾರವಾಗಿ ಪ್ರತಿಕ್ರಿಯಿಸಿದರು.
''ಬಿಜೆಪಿ ಹಗರಣಗಳ ಕುರಿತು ಯಾವ ತಂಡಗಳಿಗೆ ತನಿಖೆಗೆ ಕೊಡಬೇಕು. ಈ ನಿಟ್ಟಿನಲ್ಲಿ ಸರ್ಕಾರದಲ್ಲಿ ತೀರ್ಮಾನ ಆಗ್ತಿದೆ. ಬೇರೆ ಬೇರೆ ರೀತಿಯ ಹಗರಣಗಳು ಇವೆ. ಬಿಟ್ ಕಾಯಿನ್ ಪ್ರಕರಣಕ್ಕೆ ಸೈಬರ್ ಎಕ್ಸ್‌ಪರ್ಟ್ ತಂಡ ಬೇಕು. ಕೆಲವು ಕಡೆ ಎಸ್ಐಟಿ ತನಿಖೆ ಮಾಡಲಾಗುವುದು. ಕೆಲವು ಇಲಾಖಾವಾರು ತನಿಖೆ ಆಗುತ್ತೆ. ಕೆಲವೊಂದು ನ್ಯಾಯಾಂಗ ತನಿಖೆ ಆಗುತ್ತೆ. ಯಾವ್ಯಾವ ಹಗರಣ ಯಾವ ರೀತಿಯಲ್ಲಿ ಮಾಡಿದ್ದಾರೆ. ಆ ರೀತಿಯಲ್ಲಿ ತನಿಖೆ ಆಗುತ್ತದೆ'' ಎಂದರು.
''ನಾವು ಜನರಿಗೆ ಗ್ಯಾರಂಟಿ ಕೊಟ್ಟಿದ್ವಿ, ತನಿಖೆ ಮಾಡುಸುತ್ತೇವೆ. ಅದಕ್ಕೆ ನಾವು ಬದ್ಧ. ಬಿಟ್ ಕಾಯಿನ್ ತನಿಖೆ, ಪಿಎಸ್ಐ ಹಗರಣ, ಗಂಗಾ ಕಲ್ಯಾಣ ಹಗರಣ, ಕೆಪಿಟಿಸಿಎಲ್ ನೇಮಕಾತಿ ಹಗರಣ, ಸಹಾಯಕ ಪ್ರಾಧ್ಯಾಪಕ ನೇಮಕಾತಿ ಹಗರಣ, ಕೊರೊನಾ ಸಮಯದ ಭ್ರಷ್ಟಾಚಾರ, ಹೆಣದ ಮೇಲೆ ಹಣ ಮಾಡಿದ್ದು, ಈ ಎಲ್ಲ ವಿಚಾರಗಳನ್ನು ತನಿಖೆ ಮಾಡಿಸುತ್ತೇವೆ. ನಾವೇ ಹಿಂದೆ ಒತ್ತಾಯ ಮಾಡಿದ್ವಿ. ಜನ ಆಶೀರ್ವಾದ ಮಾಡಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ನಾವು ನಡೆಸುಕೊಳ್ಳುತ್ತೇವೆ'' ಎಂದು ತಿಳಿಸಿದರು.
''ಗಂಗಾ ಕಲ್ಯಾಣ ಅಕ್ರಮ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ ಆಗಿದೆ. ಕಲ್ಯಾಣ ಕರ್ನಾಟಕ ಯೋಜನೆಯಡಿ ಸಾವಿರಾರು ಕೋಟಿ ಅಕ್ರಮ ಆಗಿದೆ. ಇದು ಇಲಾಖಾವಾರು ತನಿಖೆ ನಡಿತಾ ಇದೆ. ಉನ್ನತ ಅಧಿಕಾರಗಳನ್ನು ತನಿಖಾ ತಂಡಕ್ಕೆ ನೇಮಕ ಮಾಡ್ತಾ ಇದ್ದೇವೆ. ಹಂತ ಹಂತವಾಗಿ ತನಿಖೆ ಮಾಡಿಕೊಂಡು ಹೋಗ್ತೇವೆ" ಎಂದರು.
ನಮ್ಮ ಹೆಸರಾದರೂ ಬರಲಿ, ಬಿಜೆಪಿಯವರ ಹೆಸರು ಬರಲಿ: ''ನಮ್ಮ ಹೆಸರು ಆದ್ರೂ ಬರಲಿ, ಬಿಜೆಪಿಯವರ ಹೆಸರು ಆದ್ರೂ ಬರಲಿ. ಯಾರೇ ಭಾಗಿಯಾಗಿದ್ರು ಮುಲಾಜಿಲ್ಲದೆ ಒಳಗೆ ಹಾಕ್ತೇವೆ. ಯಾರೇ ಭಾಗಿಯಾಗಿದ್ರು ಶಿಕ್ಷೆ ಆಗಬೇಕು. ನಾನೇ ಭಾಗಿಯಾಗಿದ್ರು ಕೂಡ ಶಿಕ್ಷೆ ಆಗಬೇಕು. ಬಿಜೆಪಿಯವರು ಹೇಳ್ತಾ ಇದ್ರು ಪ್ರಿಯಾಂಕ್ ಖರ್ಗೆ ಸಿಕ್ಕಿಹಾಕಿಕೊಳ್ತಾರೆ ಅಂತ. ಕಾಂಗ್ರೆಸ್ ಅವರೇ ಸಿಕ್ಕಿ ಹಾಕಿಕೊಳ್ತಾರೆ ಅಂತಿದ್ರು. ಬರಲಿ, ಯಾರೇ ತಪ್ಪು ಮಾಡಿದ್ರೊ ಅವರು ಸಿಕ್ಕಿಹಾಕಿಕೊಳ್ತಾರೆ'' ಎಂದರು.
''ನನ್ನ ಪ್ರಕಾರ ಕೆಪಿಎಸ್ಸಿ, ಕೆಇಎ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. 20-30 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರ ಭವಿಷ್ಯ ಏನಾಗಬೇಕು, ಕೆಲವರಿಗೆ ವಯಸ್ಸಾಗುತ್ತಿದೆ. ಕೆಲವರು ಪ್ರಾಮಾಣಿಕರು ಇದ್ದಾರೆ. ನಮಗೆ ಯುವಕರ ಭವಿಷ್ಯ ಮುಖ್ಯ. ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ'' ಎಂದು ತಿಳಿಸಿದರು. ''ಹೈಕಮಾಂಡ್ ನಾಯಕರನ್ನು ಸಚಿವರ ನಿಯೋಗ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹೈಕಮಾಂಡ್ ಭೇಟಿಯಾದ್ರೆ ಯಾವುದೇ ತಪ್ಪು ಇಲ್ಲ. ಯಾವುದೇ ಸರ್ಕಾರ ಬಂದಾಗ ವರಿಷ್ಠರ ಭೇಟಿ ಮಾಡ್ತಾರೆ. ಸಲಹೆ, ಮಾರ್ಗದರ್ಶನ ಪಡಿತಾರೆ. ಇದೊಂದು ಸೌಜನ್ಯದ ಭೇಟಿ ಅಷ್ಟೇ'' ಎಂದು ತಿಳಿಸಿದರು.
''ಅನ್ನಭಾಗ್ಯ ಯೋಜನೆಗೆ ಅಕ್ಕಿ ಹೊಂದಿಸುವ ವಿಚಾರವಾಗಿ ಮಾತನಾಡುತ್ತಾ, ಯಾವುದೇ ಸರ್ಕಾರ ಇದ್ದರೂ ಸಮಾಜದ ಕಲ್ಯಾಣ ಮುಖ್ಯ. ಅದಕ್ಕಾಗಿ ಯೋಜನೆ ಘೋಷಣೆ ಮಾಡಿದ್ದೇವೆ. ಅದಕ್ಕೆ ಸಹಕಾರ ಕೇಂದ್ರ ಸರ್ಕಾರ ಮಾಡಬೇಕು. ಅವರು ನಮಗೆ ಉಪಕಾರ ಮಾಡ್ತಾ ಇಲ್ಲ. ಪುಕ್ಸಟ್ಟೆ ಅಕ್ಕಿ ಕೇಳ್ತಾ ಇಲ್ಲ, ದುಡ್ಡು ಕೊಡ್ತೇವೆ. ರಾಜ್ಯ ಸರ್ಕಾರ ದುಡಿಯವ ಕೈ ಬಲಪಡಿಸುತ್ತಿದ್ದೇವೆ. ಅವರು ಖಾಸಗಿಗೆ ಕೊಡ್ತೇವೆ ಅಂತಿದ್ದಾರೆ. ಇದು ತಾರತಮ್ಯ. ಬಿಜೆಪಿಯವರು ಪ್ರತಿಭಟನೆ ಮಾಡ್ತಾರಂತೆ'' ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಅಕ್ಕಿ ವಿತರಣೆಯಲ್ಲಿ ರಾಜಕೀಯ ಮಾಡಿದ್ರೆ ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತೆ: ಶಾಸಕ ಶಿವಲಿಂಗೇಗೌಡ