ಬೆಂಗಳೂರು: ನಾವು ಸ್ಪೀಕರ್ ತೀರ್ಮಾನವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದೇವೆ ಎಂದು ಅನರ್ಹ ಶಾಸಕ ಮುನಿರತ್ನ ತಿಳಿಸಿದ್ದಾರೆ.
ತಮ್ಮ ವೈಯ್ಯಾಲಿಕಾವಲ್ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಲಾಗಿಲ್ಲ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆವು. ನಾವು ಯಾವುದೇ ಆಪರೇಷನ್ ಕಮಲಕ್ಕೆ ಒಳಗಾಗಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತಿರಲಿಲ್ಲ. ನಾನು ಜ್ಞಾನ ಭಾರತಿ ಯಿಂದ ಹೆಬ್ಬಾಳ ವರೆಗೂ ಮೆಟ್ರೋ ಮಾಡಲು ಕೇಳಿದ್ದೆ. ಅದನ್ನು ಮಾಡಲಿಲ್ಲ ರಾಜ್ಯಕ್ಕೆ ಬೆಂಗಳೂರು ಅತಿ ಹೆಚ್ಚು ಆದಾಯ ನೀಡುವ ನಗರ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ಆಗಲಿಲ್ಲ. ಹೀಗಾಗಿ ರಾಜೀನಾಮೆ ನೀಡಬೇಕಾಯಿತು ಎಂದಿದ್ದಾರೆ.
ಆರು ತಿಂಗಳ ಹಿಂದೆಯೇ ಏಕೆ ಹೇಳಿಲ್ಲ?
ಯಡಿಯೂರಪ್ಪ ಅವರನ್ನು ಅತೃಪ್ತರು ಮುಗಿಸುತ್ತಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರ, ಈ ಮಾತನ್ನು ಆರು ತಿಂಗಳ ಹಿಂದೆಯೇ ಏಕೆ ನಾಯಕರು ಹೇಳಲಿಲ್ಲ. ಹಲವು ಬಾರಿ ನಮಗೆ ಅಭಿವೃದ್ಧಿ ಮಾಡಲಾಗುತ್ತಿಲ್ಲ ಎಂದು ಹೇಳಿದ್ರು ಕೂಡಾ ಯಾರು ತಲೆ ಕೆಡಿಸಿಕೊಳ್ಳಲಿಲ್ಲ. ಅಪರೇಷನ್ ಕಮಲಕ್ಕೆ ಒಳಗಾಗುವ ಮತ್ತು ಕುದುರೆ ವ್ಯಾಪಾರ ಮಾಡುವಂತಹ ಹೀನ ಸ್ಥಿತಿ ನನಗೆ ಬಂದಿಲ್ಲ ಎಂದರು.
ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ನೀಡದೇ ಇದ್ದದ್ದು ನಮ್ಮ ರಾಜಿನಾಮೆಗೆ ಪ್ರಮುಖ ಕಾರಣ. ಏಳು ಬಾರಿ ಗೆದ್ದವರನ್ನು ಸಮ್ಮಿಶ್ರ ಸರ್ಕಾರ ನಿರ್ಲಕ್ಷಿಸಿತ್ತು. ಅವರು ರಾಜೀನಾಮೆ ನೀಡಿದ್ರು. ಆದರೆ ,ಕೆಲವು ಒತ್ತಡಗಳಿಗೆ ಮಣಿದು ವಾಪಸ್ ಹೋಗಿದ್ದಾರೆ ಎಂದರು.
ಪರೋಕ್ಷ ಬೆಂಬಲ
ಯಾರು ಅಭಿವೃದ್ಧಿಗೆ ಒತ್ತು ನೀಡುತ್ತಾರೋ ಅವರ ಜೊತೆ ನಾವು ಹೋಗುತ್ತೇವೆ. ಪರೋಕ್ಷವಾಗಿ ಬಿಜೆಪಿ ಜೊತೆ ಕೈ ಜೋಡಿಸುವ ಸೂಚನೆಯನ್ನು ಮುನಿರತ್ನ ನೀಡಿದ್ದಾರೆ, ಒಂದು ವೇಳೆ ಉಪಚುನಾವಣೆ ಎದುರಾದರೂ ಕೂಡಾ ಕ್ಷೇತ್ರದ ಜನ ಕೆಲಸ ಮಾಡುವವರನ್ನು ಗೆಲ್ಲಿಸ್ತಾರೆ ಎಂದರು.