ಬೆಂಗಳೂರು: ಕೆಂಪೇಗೌಡರ ಚಿಂತನೆ ಹಾಗೂ ವಿಚಾರಧಾರೆಗಳ ಹಾದಿಯಲ್ಲಿ ನಡೆದು ಕರ್ನಾಟಕವನ್ನು ಅಭಿವೃದ್ಧಿಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಕಲ್ಪ ಮಾಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ರಾಜ್ಯಕ್ಕೆ ಎರಡು ಕೊಡುಗೆ ಕೊಟ್ಟಿದ್ದಾರೆ. ವಂದೇ ಭಾರತ ರೈಲು ಮತ್ತು ವಿಮಾನನಿಲ್ದಾಣದ 2ನೇ ಟರ್ಮಿನಲ್, ಸಬರ್ಬನ್ ರೈಲು. ಕರಾವಳಿಯಲ್ಲಿ ಬಂದರು ನಿರ್ಮಾಣ ಸೇರಿದಂತೆ ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿರುವ ಪ್ರಧಾನಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾವು ಕೆಂಪೇಗೌಡರ ವಿಚಾರಧಾರೆಯ ಹಾದಿಯಲ್ಲಿ ನಡೆಯುವ ಸಂಕಲ್ಪ ಮಾಡಿದ್ದೇವೆ ಎಂದರು.
ಕರ್ನಾಟಕದ ಅಭಿವೃದ್ಧಿ ಪಥದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ : ಇಂದು ಕರ್ನಾಟಕದ ಅಭಿವೃದ್ಧಿ ಪಥದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ನಾಡಿನ ಶ್ರೇಷ್ಠ ಸಂತರಾದ ಕನಕದಾಸರು, ಮಹರ್ಷಿ ವಾಲ್ಮೀಕಿಯವರಿಗೆ ಹಾಗೂ ನಾಡಿನ ಸಂರಕ್ಷಣೆಗೆ ಜೀವತೆತ್ತ ವೀರ ವನಿತೆ ಒನಕೆ ಓಬವ್ವ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಿನ ಜನರ ಭಾವನೆಗಳಿಗೆ ಪ್ರಧಾನಿಯವರು ಗೌರವ ಸಲ್ಲಿಸಿದ್ದಾರೆ.
ಬೆಂಗಳೂರು, ಮೈಸೂರು ಚೆನ್ನೈಯನ್ನು ಸಂಪರ್ಕಿಸುವ ವಂದೇ ಭಾರತ ರೈಲಿಗೆ ಹಸಿರು ನಿಶಾನೆ ತೋರಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಕ್ಕೆ ಚಾಲನೆ ನೀಡಲಾಗಿದ್ದು, ಇದು ದೇಶದ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ. ಇದಕ್ಕಾಗಿ ಸಮಸ್ತ ಕನ್ನಡ ನಾಡಿನ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು ಇಂದು ಅಂತಾರಾಷ್ಟ್ರೀಯ ನಗರವಾಗಿ ಬೆಳೆದಿದೆ : ನಾಡಪ್ರಭು ಕೆಂಪೇಗೌಡರು, ವಿಜಯನಗರ ಸಾಮ್ರಾಜ್ಯದ ಸುವರ್ಣ ಯುಗದ ದರ್ಶನವನ್ನು ಬೆಂಗಳೂರಿನ ಸುತ್ತಮುತ್ತಲಿನ ಗ್ರಾಮಗಳಿಗೆ ಮಾಡಿಸಿದ್ದಾರೆ. ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ಇಂದು ಅಂತಾರಾಷ್ಟ್ರೀಯ ನಗರವಾಗಿ ಬೆಳೆದಿದೆ. ಯೋಜನಾಬದ್ಧ ನಗರ ನಿರ್ಮಿಸಿ, ಹಲವು ಕೆರೆಕಟ್ಟೆಗಳು, ಪೇಟೆಗಳನ್ನು ನಿರ್ಮಿಸುವ ಮೂಲಕ ಜನ ನೆಮ್ಮದಿಯ ಜೀವನ ಬದುಕುವಂತೆ ಮಾಡಿದ್ದಾರೆ.
ನಾಡಪ್ರಭು ಕೆಂಪೇಗೌಡರಿಗೆ ಗೌರವ ಸಲ್ಲಿಸುವ ಮುಖಾಂತರ ನಾಡಿನ ಸಂಸ್ಕೃತಿ, ಇತಿಹಾಸ ಪರಂಪರೆ, ಪ್ರಗತಿಪರ ಚಿಂತನೆಗೆ ಗೌರವ ಸಲ್ಲಿಸಿದಂತಾಗಿದೆ. ಗುಜರಾತಿನಲ್ಲಿ ಏಕತೆಯ ಪ್ರತಿಮೆಯಿದ್ದರೆ, ರಾಜ್ಯದಲ್ಲಿ ಸರದಾರ ಕೆಂಪೇಗೌಡರ ಪ್ರಗತಿಯ ಪ್ರತಿಮೆಯನ್ನು ಉದ್ಘಾಟಿಸಲಾಗಿದೆ ಎಂದರು.
ಪ್ರಧಾನಿ ಮೋದಿ ಆಧುನಿಕ ಭಾರತದ ವಿಕಾಸ ಪುರುಷ : ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಆಧುನಿಕ ಭಾರತದ ವಿಕಾಸ ಪುರುಷರು. ದೇಶದ ಹತ್ತುಹಲವಾರು ಸವಾಲುಗಳನ್ನು ಬಗೆಹರಿಸಿ ಬಲಿಷ್ಠ ಭಾರತವನ್ನು ಕಟ್ಟಿ, ಆತ್ಮನಿರ್ಭರ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಅಭಿವೃದ್ಧಿಯಲ್ಲಿ ಎಲ್ಲರಿಗೂ ಅವಕಾಶ ಕೊಟ್ಟು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಇಡೀ ವಿಶ್ವದಲ್ಲಿ ಆರ್ಥಿಕ ಹಿಂಜರಿತವಿದ್ದ ಸಂದರ್ಭದಲ್ಲಿ ಭಾರತ ಆರ್ಥಿಕವಾಗಿ ಬಲಿಷ್ಠಗೊಳ್ಳುತ್ತಿದ್ದರೆ, ಅದಕ್ಕೆ ಪ್ರಧಾನಿ ಮೋದಿಯವರ ಯೋಜನೆಗಳೇ ಕಾರಣ. ನವಭಾರತ ನಿರ್ಮಾಣ ಮಾಡುತ್ತಿರುವ ಓರ್ವ ವಿಕಾಸಪುರುಷರ ಕೈಯಿಂದ ಕೇಂಪೇಗೌಡರ ಮೂರ್ತಿ ಅನಾವರಣವಾಗಿರುವುದು ದೈವೇಚ್ಛೆಯಾಗಿದೆ ಎಂದರು.
ಮೋದಿಗೆ ಸನ್ಮಾನ: ಕೆಂಪೇಗೌಡರ ಪೇಟ ತೊಡಿಸಿ ಕೆಂಪೇಗೌಡರ ಬೆಳ್ಳಿ ಪ್ರತಿಮೆ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಗೌರವ ಸಲ್ಲಿಕೆ ಮಾಡಲಾಯಿತು. ನಂತರ ಕೆಂಪೇಗೌಡರ ಇತಿಹಾಸದ ಕುರಿತ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಕಿರುಚಿತ್ರ ವೀಕ್ಷಿಸಿದ ಪಿಎಂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ನಾಥ ಸ್ವಾಮೀಜಿ, ಸಚಿವರಾದ ಆರ್. ಅಶೋಕ, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಡಾ.ಕೆ. ಸುಧಾಕರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪಸ್ಥಿತರಿದ್ದರು.
ಇದನ್ನೂ ಓದಿ: ಖಡ್ಗದ ತೂಕವೇ 4 ಸಾವಿರ ಕೆಜಿ! ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ವಿಶೇಷತೆಗಳೇನು?