ಬೆಂಗಳೂರು: ರಾಜೀನಾಮೆ ನೀಡಿರುವ ಹತ್ತು ಕಾಂಗ್ರೆಸ್ ಶಾಸಕರ ಸದಸ್ಯತ್ವ ಅನರ್ಹ ಗೊಳಿಸುವಂತೆ ಸ್ಪೀಕರ್ಗೆ ದೂರು ಸಲ್ಲಿಸಲಿದ್ದೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಾಸಕರನ್ನು ಅನರ್ಹಗೊಳಿಸಲು ಮನವಿ ಮಾಡುತ್ತೇವೆ. ಮುಂದಿನ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಸ್ಪೀಕರ್ ರಮೇಶ್ ಕುಮಾರ್ಗೆ ಇದೆ ಎಂದರು. ರಾಜಕೀಯ ಬೆಳವಣಿಗೆ ಚರ್ಚೆ ಮಾಡಿದ್ದೇವೆ ಎಲ್ಲರೂ ಭಾಗವಹಿಸಿದ್ದಾರೆ, ಬೆಂಬಲ ಪುನರುಚ್ಛರಿಸಿದ್ದಾರೆ. ನಮ್ಮ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮೊದಲ ಹಂತದಲ್ಲಿ ನಮ್ಮ ಕೆಲವು ಅರ್ಹರಿಗೆ ಅವಕಾಶ ಮಾಡಲು ಆಗಲಿಲ್ಲ. ಆದ್ದರಿಂದ ನಮ್ಮ ಸಚಿವರು ಎಲ್ಲರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹತ್ತು ಶಾಸಕರನ್ನು ಬಿಟ್ಟರೆ ಉಳಿದವರು ನಿಷ್ಠರಾಗಿದ್ದಾರೆ ಎಂದರು.
ಬಿಜೆಪಿಯವರು ರಾಜ್ಯದ ಇತರ ರಾಜ್ಯದಲ್ಲಿ ಚುನಾಯಿತ ಸರ್ಕಾರ ಅಸ್ಥಿರಗೊಳಿಸುವ ಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸೇರಿ ಅತಿ ದೊಡ್ಡ ಪಕ್ಷ, ಬಿಜೆಪಿಗಿಂತ ಹೆಚ್ಚು ಪ್ರತಿಶತ ಮತದಾರರ ಒಲವಿದೆ. ಬಿಜೆಪಿಗೆ ಒಂದು ಅವಕಾಶ ನೀಡಲಾಗಿತ್ತು. ಕೋರ್ಟ್ಗೆ ಕೂಡ ಹೋಗಿದ್ದರು. ಯಡಿಯೂರಪ್ಪ ಸದನದಲ್ಲಿ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ನಂತರ ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ನಾವು ಯಶಸ್ವಿಯಾಗಿ ಸರ್ಕಾರ ರಚಿಸಿದ್ದೆವು. ಒಂದು ವರ್ಷ ಯಶಸ್ವಿಯಾಗಿ ಕಳೆದಿದ್ದೇವೆ.
ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ದಿನದಿಂದ ನಿರಂತರವಾಗಿ ಸರ್ಕಾರವನ್ನು ಅಸ್ಥಿರ ಗೊಳಿಸಲು ಯತ್ನಿಸಿದ್ದಾರೆ. ಐದು ವಿಫಲ ಯತ್ನದ ನಂತರ ಆರನೇ ಯತ್ನ ಮಾಡಿದ್ದಾರೆ. ಇದರಲ್ಲಿ ರಾಜ್ಯ ಬಿಜೆಪಿ ನಾಯಕರು ಮಾತ್ರವಲ್ಲ ರಾಷ್ಟ್ರೀಯ ನಾಯಕರಾದ ಅಮಿತ್ ಶಾ, ಮೋದಿ ಅವರ ಪಾತ್ರವೂ ಇದೆ. ಅವರ ಮಾರ್ಗದರ್ಶನದಲ್ಲಿ ರಾಜ್ಯ ಬಿಜೆಪಿ ಇನ್ನೊಂದು ಯತ್ನವನ್ನು ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ.
ಸಚಿವ ಸ್ಥಾನ, ಪದವಿ, ಹಣದ ಆಮಿಷ ತೋರಿಸಿ ಶಾಸಕರನ್ನು ಸೆಳೆದಿದೆ. ನಾನು ಹಲವು ಸಾರಿ ಪ್ರಶ್ನಿಸಿದ್ದೇನೆ. ಇಷ್ಟೊಂದು ಹಣ ಎಲ್ಲಿಂದ ಬಂತು? ಯಾರು ಕೊಟ್ಟರು? ಕಾನೂನು ಬಾಹಿರ ಹಣಗಳಿಕೆಯದ್ದಾ ಅನ್ನುವ ಅನುಮಾನ ಕಾಡಿದೆ. ಸಂವಿಧಾನ ಬಾಹಿರವಾಗಿ ಸರ್ಕಾರ ಅಸ್ಥಿರ ಗೊಳಿಸುವ ಯತ್ನ ಮಾಡಿದೆ. ನಮ್ಮ ಕೆಲ ಶಾಸಕರು ಬಿಜೆಪಿ ಆಮಿಷಕ್ಕೆ ಬಲಿಯಾಗಿದ್ದಾರೆ. ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಕಾನೂನಿನ ಅರಿವು ಇದೆಯೋ ಇಲ್ಲವೋ ಗೊತ್ತಿಲ್ಲ. ಪಕ್ಷದ ಚಿಹ್ನೆ ಅಡಿ ಗೆದ್ದವರು ಪಕ್ಷಾಂತರ ಮಾಡಿ ರಾಜೀನಾಮೆ ಸಲ್ಲಿಸಿದರೆ, ರಾಜೀನಾಮೆ ಸಲ್ಲಿಸಿದ ಶಾಸಕರ ಸ್ಥಾನವನ್ನು ಅನರ್ಹ ಗೊಳಿಸುವ ಅವಕಾಶ ಇದೆ. ಪಕ್ಷ ವಿರೋಧಕ್ಕೆ ಚಟುವಟಿಕೆ ಹಿನ್ನೆಲೆ ಅನರ್ಹಗೊಳಿಸಲು ಸ್ಪೀಕರ್ಗೆ ಮನವಿ ಮಾಡುತ್ತೇವೆ. ಈಗಲೂ ವಾಪಸ್ ಬರುವಂತೆ ಅವರಿಗೆ ಮನವಿ ಮಾಡುತ್ತೇವೆ. ಬರದಿದ್ದರೆ ಅನರ್ಹಗೊಳಿಸಲು ಸೂಚಿಸುತ್ತೇವೆ ಎಂದಿದ್ದಾರೆ.
ರಾಜೀನಾಮೆ ಸಲ್ಲಿಸಿದ ಶಾಸಕರದ್ದು ಸ್ವಯಂ ಪ್ರೇರಣೆಯಿಂದ ಹಾಗೂ ಪ್ರಾಮಾಣಿಕವಾಗಿ ಅಲ್ಲ ಎಂದು ವಾದಿಸುತ್ತೇವೆ. ಇದು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಬರುತ್ತದೆ. 10 ಶಡ್ಯೂಲ್ ಅಡಿ ಇದು ಬರಲಿದೆ. ಅವರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಬೇಕು. ಸ್ಪೀಕರ್ ಇವರ ರಾಜೀನಾಮೆ ವಿಚಾರದಲ್ಲಿ ನಿರ್ಧರಿಸಲು ಸ್ವತಂತ್ರರಾಗಿದ್ದಾರೆ. ಅವರಿಗೆ ನಾವು ಅನರ್ಹಗೊಳಿಸುವಂತೆ ಮನವಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆರು ವರ್ಷ ಚುನಾವಣೆ ಎದುರಿಸದಂತೆ ಅನರ್ಹ ಗೊಳಿಸುವಂತೆ ಮನವಿ ಮಾಡುತ್ತೇವೆ. ಇವೆಲ್ಲ ಸಂವಿಧಾನ ಹಾಗೂ ಕಾನೂನಿನ ಅಡಿ ಬರುವ ವಿಚಾರಗಳು. ಇದರ ಬಗ್ಗೆ ಸ್ಪೀಕರ್ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಬಿಜೆಪಿಯ ಕ್ರಮ, ನಿಲುವು ಹಾಗೂ ನಿರ್ಧಾರ ಖಂಡಿಸಿ ನಮ್ಮ ಶಾಸಕರ ಜತೆ ಒಂದು ಗಂಟೆ ಧರಣಿ ನಡೆಸಿ ನಂತರ ಸ್ಪೀಕರ್ ಬಳಿ ತೆರಳಿ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ.