ಬೆಂಗಳೂರು: ಮೀಸಲಾತಿ ಹೆಚ್ಚಳದ ಬಗ್ಗೆ ಅಧಿಕೃತ ಆದೇಶದ ಪ್ರತಿ ನಮ್ಮ ಕೈ ಸೇರುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ವಾಲ್ಮೀಕಿ ಸಮಾಜದ ಪ್ರಸನ್ನಾನಂದಪುರಿ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸ್ವಾಮೀಜಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ ಎಸ್ಟಿ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ, ರಾಜ್ಯ ಸರ್ಕಾರದ ನಿರ್ಧಾರದಿಂದ ಈಗ ಅಡುಗೆ ಮಾತ್ರ ಆಗಿದೆ. ಇನ್ನೂ ತಟ್ಟೆಗೆ ಬಡಿಸಿಲ್ಲ.
ತಟ್ಟೆಗೆ ಬಡಿಸಿದ ಮೇಲೆ ಊಟದ ಸವಿ ನೋಡಿ ಬಳಿಕ ನಾವು ತೀರ್ಮಾನ ಮಾಡುತ್ತೇವೆ. ಮೀಸಲಾತಿ ಹೆಚ್ಚಳದ ಬಗ್ಗೆ ಅಧಿಕೃತ ಆದೇಶ ನಮ್ಮ ಕೈ ಸೇರುವವರೆಗೂ ಧರಣಿ ಕೈ ಬಿಡಲ್ಲ. ನಮ್ಮ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ 240 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸುತ್ತಿದ್ದಾರೆ. ನಾಗಮೋಹನ್‌ದಾಸ್ ಸಮಿತಿ ವರದಿ ಅನುಷ್ಠಾನಗೊಳಿಸಿ ಮೀಸಲಾತಿ ಹೆಚ್ಚಳದ ಆದೇಶ ಹೊರಡಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಈ ಬಗ್ಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಮಗೆ ಆದೇಶ ಪ್ರತಿ ಸಿಗುವವರೆಗೂ ಕಾಯುತ್ತೇವೆ. ಆದೇಶ ಪ್ರತಿ ಸಿಕ್ಕ ಕೂಡಲೇ ಧರಣಿ ಕೈಬಿಡುತ್ತೇವೆ ಎಂದಿದ್ದಾರೆ.
ಶತಮಾನಗಳಿಂದ ನಮ್ಮ ಸಮುದಾಯ ಶೋಷಣೆಗೆ ಒಳಗಾಗಿದೆ. ಸಮಾಜ ಮುಖ್ಯವಾಹಿನಿಗೆ ಬರಬೇಕು ಎಂಬುದು ನಮ್ಮ ಗಟ್ಟಿ ನಿಲುವು. ಹೀಗಾಗಿಯೇ 240 ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ಇಂದು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಆದೇಶ ಪ್ರತಿಯನ್ನು ಯಾರ ಮೂಲಕವಾದರೂ ಕಳುಹಿಸಲಿ, ಪ್ರತಿ ನಮ್ಮ ಕೈ ಸೇರಬೇಕಷ್ಟೇ ಎಂದು ಹೇಳಿದರು.
ಇದಕ್ಕೂ ಮೊದಲು ತಮ್ಮನ್ನು ಭೇಟಿ ಮಾಡಿದ ಕಾಂಗ್ರೆಸ್ ಹಾಗೂ ಬಿಜೆಪಿಯ ಸಮುದಾಯದ ನಾಯಕರ ಜತೆ ಚರ್ಚಿಸಿದ ಅವರು, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದರು.
ಇದನ್ನೂ ಓದಿ: ಟಿಪ್ಪು, ತಾಳಗುಪ್ಪ ಎಕ್ಸ್ಪ್ರೆಸ್ ರೈಲುಗಳ ಹೆಸರು ಬದಲಾವಣೆ: ಶುಕ್ರವಾರದ ಶುಭಸುದ್ದಿ ಎಂದ ಸಂಸದ ಪ್ರತಾಪ್ ಸಿಂಹ