ಬೆಂಗಳೂರು: ಮೊದಲು ಬಿಬಿಎಂಪಿ ಚುನಾವಣೆಗೆ ತಯಾರಿ ಮಾಡಬೇಕು. ಜೊತೆಗೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರಬೇಕು ಎಂದು ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕಾರ್ಯಾಧ್ಯಕ್ಷರಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಕಚೇರಿಗೆ ಆಗಮಿಸಿದ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿ, ನಮ್ಮ ರಾಷ್ಟ್ರೀಯ ಅಧ್ಯಕ್ಷರು ಸೋನಿಯಾ ಗಾಂಧಿ, ಇಲ್ಲಿನ ಕೆಪಿಸಿಸಿ ಅಧ್ಯಕ್ಷರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಹಿರಿಯ ನಾಯಕರು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಮುಂದೆ ಪಕ್ಷ ಸಂಘಟನೆ ಮಾಡಬೇಕು. ಮೊದಲು ಬಿಬಿಎಂಪಿ ಚುನಾವಣೆಗೆ ತಯಾರಿ ಮಾಡಬೇಕು. ಜೊತೆಗೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಎಲ್ಲರ ಜೊತೆಗೆ ಸೇರಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ನಮ್ಮ ಮುಂದೆ ಸಾಕಷ್ಟು ದೊಡ್ಡ ಸವಾಲು ಇದೆ. ಪಕ್ಷ ಬೆಳೆಸುವುದಕ್ಕೆ ಹಾಗೂ ಬಲವಾಗಿ ಸಂಘಟಿಸುವುದಕ್ಕೆ ಶ್ರಮಿಸಬೇಕಾಗಿದೆ. ಮುಖ್ಯವಾಗಿ ನಮ್ಮ ಮುಂದೆ ಬಿಬಿಎಂಪಿ ಚುನಾವಣೆ ಇದೆ ಹಾಗೂ ಇದಾದ ಬಳಿಕ ಬಹುಮುಖ್ಯವಾಗಿ 2023ರ ರಾಜ್ಯ ವಿಧಾನಸಭೆ ಚುನಾವಣೆ ಇದೆ. ಆ ಸಂದರ್ಭಕ್ಕೆ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಬೇಕಿದೆ.
ಮೂರ್ನಾಲ್ಕು ಮಂದಿ ನಮ್ಮ ಸ್ನೇಹಿತರು ಪಕ್ಷವನ್ನು ಬಿಟ್ಟು ಹೋಗಿದ್ದಾರೆ. ಆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಾಗಬೇಕಿದೆ. ಕೆಲವಷ್ಟು ಕ್ಷೇತ್ರಗಳಲ್ಲಿ ಸತತವಾಗಿ ಮೂರು ನಾಲ್ಕು ಬಾರಿ ಸೋತಿದ್ದೇವೆ ಅಂತಹ ಕ್ಷೇತ್ರಗಳನ್ನು ವಿಶೇಷವಾಗಿ ಕೇಂದ್ರೀಕರಿಸಬೇಕಿದೆ. ಪಕ್ಷದ ವಿವಿಧ ಘಟಕಗಳನ್ನು ಕೂಡ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಪಕ್ಷದ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ನಿರ್ವಹಿಸಬೇಕಾದ ಕೆಲಸವನ್ನು ಅಧ್ಯಕ್ಷರು ಗಮನಿಸುತ್ತಾರೆ. ಪಕ್ಷ ಸಂಘಟನೆ ವಿಚಾರದಲ್ಲಿ ನನ್ನದೇ ಆದ ಯೋಜನೆಗಳಿವೆ ಅವನ್ನು ಜಾರಿಗೆ ತರಲು ಪ್ರಯತ್ನಿಸುತ್ತೇನೆ ಎಂದು ವಿವರಿಸಿದರು.
ಇದನ್ನೂ ಓದಿ: 'ನಾನು ರಾಜೀನಾಮೆ ನೀಡಬೇಕೆಂದರೆ ಉಪ ಸಭಾಪತಿಗಳ ನೇಮಕ ಆಗಬೇಕಲ್ಲವೇ?'