ಬೆಂಗಳೂರು: "ಬಹುದೊಡ್ಡ ಜನಾಶೀರ್ವಾದದೊಂದಿಗೆ ನಾಳೆ ರಚನೆಯಾಗುತ್ತಿರುವ ಕಾಂಗ್ರೆಸ್ ಪಕ್ಷದ ನೂತನ ಸರ್ಕಾರ ರಾಜ್ಯದ ಜನರ ಧ್ವನಿಯಾಗಿ ಕೆಲಸ ಮಾಡಲಿದೆ. ಪಕ್ಷ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ" ಎಂದು ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, "ಕರ್ನಾಟಕ ರಾಜ್ಯದ ಜನತೆಗೆ, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ನೀವು ಬಯಸಿದ ಸರ್ಕಾರ. ಜನರ ಧ್ವನಿ ರಾಜ್ಯ ಸರ್ಕಾರದ ಧ್ವನಿಯಾಗಲಿದೆ. ನಾವು ನಮ್ಮ ಮೊದಲ ಸಚಿವ ಸಂಪುಟದಲ್ಲಿ ನಮ್ಮ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ" ಎಂದರು.
"ನಾಳೆ ಸರ್ಕಾರ ರಚನೆ ಆಗುತ್ತಿದೆ. ಕಾರ್ಯಕ್ರಮಕ್ಕೆ ನಮ್ಮ ಎಲ್ಲ ನಾಯಕರು ಆಗಮಿಸುತ್ತಿದ್ದಾರೆ. ರಾಷ್ಟ್ರದ ಅನೇಕ ನಾಯಕರಿಗೆ ಆಹ್ವಾನ ನೀಡಲಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮಾಧ್ಯಮಗಳ ಮೂಲಕ ಆಹ್ವಾನ ನೀಡುತ್ತಿದ್ದೇನೆ. ಈ ಕಾರ್ಯಕ್ರಮಕ್ಕೆ ಆಗಮಿಸುವರು 11 ಗಂಟೆಯೊಳಗಾಗಿ ಆಗಮಿಸಬೇಕು. ತಡವಾಗಿ ಬಂದರೆ ಗಣ್ಯರ ಭೇಟಿ ಹಿನ್ನೆಲೆಯಲ್ಲಿ ರಸ್ತೆ ನಿರ್ಬಂಧ ಮಾಡಲಾಗುತ್ತದೆ. ನೂತನ ಸರ್ಕಾರ ರಚನೆ ಕಾರ್ಯಕ್ರಮ ಪಕ್ಷಾತೀತವಾಗಿರಲಿದೆ. ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೂ ಆಹ್ವಾನ ನೀಡುತ್ತೇವೆ. ನೀವು ಅನ್ಯತಾ ಭಾವಿಸಬೇಡಿ, ಜನಪ್ರತಿನಿಧಿಗಳಾಗಿದ್ದೀರಿ. ನೀವೂ ಸರ್ಕಾರದ ಭಾಗ. ಹೀಗಾಗಿ ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ಸಚಿವ ಸಂಪುಟ ರಚನೆ: ಆಕಾಂಕ್ಷಿಗಳ ಪಟ್ಟಿಯೊಂದಿಗೆ ಸಿದ್ದರಾಮಯ್ಯ, ಡಿಕೆಶಿ ಇಂದು ದೆಹಲಿಗೆ
ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿ, "ನಾವು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಸಚಿವ ಸಂಪುಟ ರಚನೆ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಸದ್ಯಕ್ಕೆ ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುವುದು ನಮ್ಮ ಆದ್ಯತೆ. ನಾವೆಲ್ಲ ಒಟ್ಟಾಗಿ ಕೆಲಸ ಮಾಡಿ ಜನರ ಸೇವೆ ಮಾಡುತ್ತೇವೆ" ಎಂದು ಭರವಸೆ ಕೊಟ್ಟರು.
ಪಕ್ಷದ ಗ್ಯಾರಂಟಿ ಯೋಜನೆಗಳ ಜಾರಿಗೆ ಷರತ್ತು ಅನ್ವಯ ಎಂಬ ಪ್ರಶ್ನೆಗೆ, "ಈಗ ಈ ವಿಚಾರವಾಗಿ ಏನನ್ನೂ ಹೇಳುವುದಿಲ್ಲ. ನಾವು ನುಡಿದಂತೆ ನಡೆಯುತ್ತೇವೆ. ನಾವು ತೀರ್ಮಾನ ಮಾಡಿ ನಿಮಗೆ ಮಾಹಿತಿ ನೀಡಿಯೇ ಯೋಜನೆ ಜಾರಿ ಮಾಡುತ್ತೇವೆ. ಈ ಗ್ಯಾರಂಟಿ ಯೋಜನೆಗಳು ಕೇವಲ ಡಿ.ಕೆ.ಶಿವಕುಮಾರ್ ಅಥವಾ ಸಿದ್ದರಾಮಯ್ಯ ಅವರ ಗ್ಯಾರಂಟಿ ಅಲ್ಲ. ಇದು ಕಾಂಗ್ರೆಸ್ ಗ್ಯಾರಂಟಿ" ಎಂದು ಹೇಳಿದರು.
ಇದನ್ನೂ ಓದಿ: ಖರ್ಗೆ ತವರು ಕಲಬುರಗಿಯಲ್ಲಿ ನಾಲ್ವರ ಮಧ್ಯೆ ಸಚಿವ ಸ್ಥಾನಕ್ಕೆ ಪೈಪೋಟಿ
ಕಂಠೀರವ ಸ್ಟೇಡಿಯಂಗೆ ತೆರಳಿ ಪರಿಶೀಲನೆ: ಇದೇ ವೇಳೆ ನಾಳೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜರಗುವ ಕಂಠೀರವ ಸ್ಟೇಡಿಯಂ ತೆರಳಿದ ಡಿಕೆಶಿ, ಸಿದ್ಧತಾ ಕಾರ್ಯದ ಪರಿಶೀಲನೆ ನಡೆಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೊಯಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಿದ್ಧತೆ, ಭದ್ರತೆ ಬಗ್ಗೆ ಡಿಕೆಶಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮಧ್ಯಾಹ್ನ 12.30 ಕ್ಕೆ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯೇತರ ಸಿಎಂಗಳು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ನಾಯಕರು, ಅನ್ಯ ರಾಜ್ಯದ ಸಿಎಂಗಳಿಗೆ ಆಹ್ವಾನ ನೀಡಲಾಗಿದೆ. ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಸೇರಿ ಹಿಮಾಚಲ ಪ್ರದೇಶ, ಚತ್ತೀಸ್‌ಗಢ, ಜಾರ್ಖಂಡ್ ಸಿಎಂಗಳು ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕೂಡ ಆಗಮಿಸಲಿದ್ದಾರೆ.
ಇದನ್ನೂ ಓದಿ: ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಘಟಾನುಘಟಿ ನಾಯಕರಿಗೆ ಆಹ್ವಾನಿಸಿದ ಕಾಂಗ್ರೆಸ್...