ಬೆಂಗಳೂರು: ರಾಜ್ಯದ ಜನತೆ ನೆರೆಯಿಂದ ತತ್ತರಿಸಿದ್ದಾರೆ. ಹಾಗಾಗಿ ಪ್ರಥಮ ಆದ್ಯತೆ ಅವರಿಗೆ ಕೊಡಬೇಕು ಎಂದು ಸ್ಪೀಕರ್ ಅವರಿಗೆ ವಿವರಿಸಿದ್ದೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಿಎಂ, ಸ್ಪೀಕರ್ ಬಿಎಸಿ ಸಭೆ ಕರೆದಿದ್ರು. ಆದ್ರೆ, ಜೆಡಿಎಸ್ನವರು ಸಭೆಯನ್ನು ಬಹಿಷ್ಕರಿಸಿದ್ದಾರೆ. ಕಲಾಪಗಳ ನಿಯಮ 60ರ ಪ್ರಕಾರ, ನಾವು ಮೋಷನ್ ಮೂವ್ ಮಾಡಿದ್ದೇವೆ.ಇದಕ್ಕೆ ವಿರುದ್ಧವಾಗಿ ಸ್ಪೀಕರ್ ನಡೆದುಕೊಂಡಿದ್ದಾರೆ. ಈ ಮೂಲಕ ವಿರೋಧ ಪಕ್ಷದ ಹಕ್ಕನ್ನು ಕಿತ್ತುಕೊಂಡಿದ್ದಾರೆ ಎಂದರು.
ನಾವು ಈ ಕುರಿತು ಚರ್ಚೆ ಮಾಡುವುದಕ್ಕೂ ಅವರು ಅವಕಾಶ ಕೊಡಲಿಲ್ಲ. ಈ ಮೂಲಕ ಪ್ರಜಾಪ್ರಭುತ್ವ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಮೊದಲು ಪ್ರವಾಹದ ಬಗ್ಗೆ ಚರ್ಚೆ ಆಗಬೇಕು, ಅದಕ್ಕೆ ಸರ್ಕಾರ ಉತ್ತರ ಕೊಡಬೇಕು. ಉತ್ತರ ಕರ್ನಾಟಕ ಭಾಗದ ಜನರು ಪ್ರಶ್ನೆ ಕೇಳಬೇಕು. ಜೊತೆಗೆ ಅದಕ್ಕೆ ಉತ್ತರ ನೀಡಬೇಕು. ನಾವು 7 ತಂಡಗಳನ್ನು ಮಾಡಿ ಅಧ್ಯಯನ ಮಾಡಿದ್ದೇವೆ. ಅವರ ಅಭಿಪ್ರಾಯಗಳನ್ನು ಹೇಳಬೇಕು ಎಂದರು.
ಪ್ರಧಾನಿ ಯಾಕೆ ಬರಲಿಲ್ಲ, ಕೆಲವರು ಬಂದ್ರು, ಹೋದ್ರು. ಇದನ್ನೆಲ್ಲಾ ಚರ್ಚೆ ಮಾಡಬೇಕು. ಜೊತೆಗೆ 10 ದಿನಗಳ ಅಧಿವೇಶನ ಕರೆಯಬೇಕು. ಕ್ಷೇತ್ರದ ಅನುದಾನಗಳನ್ನು ತಡೆ ಹಿಡಿದ್ದಿದ್ದಾರೆ. ನಾವು ಇಲ್ಲಿ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳಬೇಕು. ನಮಗೆ ಇರುವುದು ಇದೇ ವೇದಿಕೆ. ಇಲ್ಲಿ ಹೇಳದೆ ಮತ್ತೆಲ್ಲಿ ಹೇಳಬೇಕು. ನಾವೇನು ಬೆಂಗಳೂರನ್ನು ರೌಂಡ್ ಹಾಕಿಕೊಂಡು ಹೋಗುವುದಕ್ಕೆ ಬರುತ್ತೇವಾ? ಎಂದು ಕೇಳಿದ್ದಾಗಿ ತಿಳಿಸಿದರು.
ನಾವು 10 ದಿನ ಅಧಿವೇಶನ ಮಾಡಬೇಕು ಎಂದು ಕೇಳಿದ್ದೇವೆ. ಆದ್ರೆ ಅದಕ್ಕೆ ಸ್ಪೀಕರ್ ಒಪ್ಪಲಿಲ್ಲ. ನಾವು ಬಿಎಸಿ ಸಭೆಯನ್ನು ವಾಕ್ ಔಟ್ ಮಾಡಿದೆವು. ಉತ್ತರ ಕರ್ನಾಟಕ ಜನರ ಬದುಕಿಗೆ ಸ್ಪಂದಿಸುವ ಕೆಲಸ ತುರ್ತಾಗಿ ಆಗಬೇಕು ಎಂದು ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ರು.