ಬೆಂಗಳೂರು : ಕೋವಿಡ್-19 ಹಿನ್ನೆಲೆ ರಾಜ್ಯ ಸರ್ಕಾರದ ನೀತಿಯಂತೆ ಈವರೆಗೆ 267 ಶ್ರಮಿಕ್ ವಿಶೇಷ ರೈಲುಗಳ ಮೂಲಕ ಹೊರ ರಾಜ್ಯದ 3.79 ಲಕ್ಷ ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕಳಿಸಿಕೊಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಈ ಕುರಿತು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಸಲ್ಲಿರುವ ಲಿಖಿತ ಹೇಳಿಕೆಯಲ್ಲಿ ಈ ಮಾಹಿತಿ ನೀಡಲಾಗಿದೆ.
ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕಳಿಸಿ ಕೊಡಲು ರಾಜ್ಯ ಸರ್ಕಾರ ಯೋಜನಾಬದ್ಧ ವ್ಯವಸ್ಥೆ ಮಾಡಿದೆ. ತನ್ನ ಸ್ವಂತ ಊರಿಗೆ ತೆರಳ ಬಯಸುವ ವಲಸೆ ಕಾರ್ಮಿಕರಿಗೆ ಅವರ ತವರು ರಾಜ್ಯಕ್ಕೆ ಸುರಕ್ಷಿತವಾಗಿ ಕಳಿಸಿಕೊಡುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಆದರಂತೆ ಕ್ರಮಕೈಗೊಳ್ಳಲಾಗುತ್ತಿದೆ. ಈವರೆಗೆ (ಜೂನ್16) ರಾಜ್ಯದ ವಿವಿಧ ಜಿಲ್ಲೆಗಳಿಂದ 267 ಶ್ರಮಿಕ್ ವಿಶೇಷ ರೈಲುಗಳ ಮೂಲಕ 3,79,195 ವಲಸೆ ಕಾರ್ಮಿಕರನ್ನು ಕಳಿಸಿಕೊಡಲಾಗಿದೆ.
ಅದೇ ರೀತಿ ಜೂನ್ 16ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಸ್ಸೋಂ, ತ್ರಿಪುರಾ, ನಾಗಲ್ಯಾಂಡ್, ಮಣಿಪುರ ಸೇರಿ ಈಶಾನ್ಯ ರಾಜ್ಯಗಳಿಗೆ 23 ಶ್ರಮಿಕ್ ವಿಶೇಷ ರೈಲುಗಳಲ್ಲಿ 34,815 ವಲಸೆ ಕಾರ್ಮಿಕರು ಅವರ ಸ್ವಂತ ಊರುಗಳಿಗೆ ತೆರಳಿದ್ದಾರೆ ಎಂದು ಸರ್ಕಾರ ಹೇಳಿದೆ.