ಹೊಸಕೋಟೆ: ಹೊಸಕೋಟೆಯಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದು ನಾವು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ವಿರುದ್ಧ ಸಂಸದ ಬಿಎನ್ ಬಚ್ಚೇಗೌಡ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ನಾವು. ಅದನ್ನು ಯಡಿಯೂರಪ್ಪ ಅವರು ತಿಳಿದುಕೊಳ್ಳಬೇಕು. ಹಣ ಮತ್ತು ಅವಕಾಶ ಬಳಸಿಕೊಂಡು ಎಂಟಿಬಿ ನಾಗರಾಜ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಎಂದು ಆರೋಪಿಸಿದರು.
ಬಂಡವಾಳ ಹೂಡಿ ಎಂಟಿಬಿ ಬಿಜೆಪಿಗೆ ಬಂದಿದ್ದಾರೆ. ಬಂಡವಾಳ ಎಲ್ಲಿ ಸೇರಿದೆ, ಯಾವ ರೀತಿ ಅನ್ನೋದು ಸಹ ನನಗೆ ಗೊತ್ತಿದೆ. ಅದನ್ನು ನಾನು ಹೇಳುವುದಕ್ಕೆ ಹೋಗುವುದಿಲ್ಲ. ಸುಮ್ಮನೆ ಎಂಟಿಬಿ ನಾಗರಾಜ್ ಹೋಗಿಲ್ಲ ಬಂಡವಾಳ ಹೂಡಿ ಹೋಗಿರುವುದು, ಎಂಎಲ್‌ಸಿ ಆಗಿರುವುದು. ಆದರೆ, ಶರತ್ ಬಚ್ಚೇಗೌಡ ಹಿಂದಿನ ಬಾಗಿಲಿನಿಂದ ಹೋಗಿಲ್ಲ . ಮತದಾರರ ಮತ ಪಡೆದು ಶಾಸಕನಾಗಿರುವುದು ಎಂದು ಕಿಡಿಕಾರಿದರು.
ಹೊಸಕೋಟೆ ತಾಲೂಕಿನ ರಾಜಕಾರಣ ಶುರು ಮಾಡಿದ್ದು ಎಂಟಿಬಿ ನಾಗರಾಜ್. ನಮ್ಮ ಕುಟುಂಬ ಅನೇಕ ವರ್ಷಗಳಿಂದ ಹೊಸಕೋಟೆ ತಾಲೂಕು ಕಟ್ಟಿ ಬೆಳೆಸಿದೆ. ನಮ್ಮ ವಿರುದ್ಧ ವ್ಯಕ್ತಿಗತವಾಗಿ ಮಾತನಾಡುವುದನ್ನ ಬಿಡಬೇಕು. ಎಂಟಿಬಿ ನಾಗರಾಜ್ ಹೊಸಕೋಟೆ ಕ್ಷೇತ್ರದ ಮತದಾರನೇ ಅಲ್ಲ. ಗರುಡಚಾರ್ ಪಾಳ್ಯದಿಂದ ಬಂದು ಇಲ್ಲಿ ಅಭಿವೃದ್ಧಿ ಮಾಡಿದ್ದೇನೆ ಅಂತಾ ಸುಳ್ಳು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.
ಯಾವುದೋ ತ್ಯಾಪೇ ರಸ್ತೆಗಳು ಹಾಕಿಬಿಟ್ಟು ಜನರ ಹತ್ತಿರ ಎಲ್ಲಾ ನಾನೇ ಮಾಡಿದ್ದು ಅನ್ನೋದಲ್ಲ. ಇವನು ಕ್ಷೇತ್ರದಲ್ಲಿ ಮಾಡಿರುವುದು ದ್ವೇಷದ ರಾಜಕರಣ. ಎಲ್ಲಾರ ಮೇಲೆ ದ್ವೇಷ ಸಾಧಿಸುವುದು ಇಂತವರು ಉದ್ಧಾರ ಆಗಲ್ಲ. ಹೊಸಕೋಟೆ ತಾಲೂಕಿನಲ್ಲಿ ನಾಶ ಆಗುತ್ತಾನೆ ಎಂದು ಗುಡುಗಿದರು.