ಬೆಂಗಳೂರು: ಎಸಿಬಿ ಅಧಿಕಾರಿಗಳು ಇಂದು ನಮ್ಮ ಬಳಿ ಏನೆಲ್ಲ ದಾಖಲೆಗಳನ್ನು ಕೇಳಿದ್ದಾರೋ ಅದೆಲ್ಲವನ್ನೂ ನಾವು ಅವರಿಗೆ ನೀಡಿದ್ದೇವೆ ಮತ್ತು ಅವರ ವಿಚಾರಣೆಗೆ ನಾವು ಎಲ್ಲ ರೀತಿಯಲ್ಲೂ ಸಹಕರಿಸಲು ಸಿದ್ಧರಿದ್ದೇವೆ ಎಂದು ಬಿ ಜೆಡ್ ಶಕೀಲ್ ಅಹ್ಮದ್ ಖಾನ್ ಅವರು ತಿಳಿಸಿದ್ದಾರೆ.
ಚಾಮರಾಜಪೇಟೆ ಶಾಸಕ ಹಾಗೂ ಮಾಜಿ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಅವರ ಸಹೋದರರಾಗಿರುವ ಶಕೀಲ್, ಎಸಿಬಿ ಅಧಿಕಾರಿಗಳ ದಾಳಿ ಹಾಗೂ ಪರಿಶೀಲನೆ ಬಳಿಕ ಸುದ್ದಿಗಾರರಿಗೆ ಈ ಮಾಹಿತಿಯನ್ನು ನೀಡಿದ್ದಾರೆ. ನಮ್ಮ ಅಣ್ಣನವರ ಸಮಾಜ ಸೇವೆ ಮತ್ತು ಯಶಸ್ಸು ಸಹಿಸದವರು, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಅವರ ಹೆಸರಿಗೆ ಕಳಂಕ ತರುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಬೆಳಗ್ಗೆ ಏಕಾಏಕಿ ಜಮೀರ್ ಅಹ್ಮದ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ದಾಳಿಗೆ ರಾಜ್ಯಾದ್ಯಂತ ಜಮೀರ್ ಅಹಮದ್ ಅಭಿಮಾನಿಗಳು ಪ್ರತಿಭಟನೆ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾಳಿಯ ಬಳಿಕ ಜಮೀರ್ ಅಹ್ಮದ್ ಇದುವರೆಗೂ ಯಾವುದೇ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿಲ್ಲ.
ಓದಿ: ಮುಂದಿನ ಸಂಪುಟದಲ್ಲಿ ನೂತನ ಉದ್ಯೋಗ ನೀತಿ ಮಂಡಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ
ಜಮೀರ್ ಬಳಿ ಗನ್ ಇದೆ ಆದ್ದರಿಂದ ಬುಲೆಟ್ಸ್ ಸಿಕ್ಕಿದೆ: ಎಸಿಬಿ ದಾಳಿ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಒಡೆತನದ ಯು.ಬಿ ಸಿಟಿಯ ಫ್ಲ್ಯಾಟ್ನಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಕೀಲ್ ಅಹ್ಮದ್ 'ಜಮೀರ್ ಬಳಿ ಪರವಾನಗಿ ಸಹಿತ ಗನ್ ಇದೆ, ಹಾಗಾಗಿ ಬುಲೆಟ್ ಸಿಕ್ಕಿವೆ ಎಂದರು.