ಬೆಂಗಳೂರು: ನಮ್ಮ ಪಕ್ಷದ ಪರವಾಗಿ ಅನುಕಂಪ ತಿರುಗಿಸುವ ನೇತಾರರು ಪಕ್ಷದಲ್ಲಿದ್ದಾರೆ. ಚಂದ್ರಗುಪ್ತ, ಚಾಣಕ್ಯ ನಮ್ಮಲ್ಲೇ ಇರುವುದರಿಂದ ನಮಗೆ ಮುಂದಿನ ಚುನಾವಣೆಯಲ್ಲಿ ಯಾವುದೇ ಭಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಸಂಖ್ಯೆ ನಿಯಂತ್ರಣ ಸಂಬಂಧ ಓವೈಸಿ ವಿರೋಧ ಮಾಡಿದ್ದಾರೆ. ಮೊದಲಿನಿಂದಲೂ ಎಂಐಎಂ ಅದನ್ನೇ ಹೇಳ್ತಿದೆ. ಅದರ ಪೂರ್ವಾಶ್ರಮ ಗೊತ್ತಿರೋರು ಯಾರೂ ಅವರನ್ನ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹಿಂದೆ ರಜಾಕರ ಮುಂದುವರಿದ ಭಾಗವೇ ಈ ಎಂಐಎಂ. ಹೊಸದಾಗಿ ನಿರೀಕ್ಷೆ ಮಾಡಿದರೆ ಹೇಳಬಹುದು.
ನಾನು ಹಳ್ಳಿಯಿಂದ ಬಂದವನು, ಕೋಳಿ ಕೇಳಿ ಖಾರ ಮಸಾಲಿ ಅರೆಯಲ್ಲ. ಮೋಹನ್ ಭಾಗವತ್ ಅವರು ದೇಶದ ಹಿತದೃಷ್ಟಿಯಿಂದ ಒಂದು ಸಲಹೆ ನೀಡಿದ್ದಾರೆ. ಸಂಸತ್‌ನಲ್ಲಿ, ವಿಧಾನಸಭೆಯಲ್ಲಿ, ಎಲ್ಲ ಕಡೆ ಚರ್ಚೆಯಾಗಲಿ, ಆ ನಂತರ ಜಾರಿಗೆ ಬರಲಿ. ನಮ್ಮಲ್ಲಿ ಬಲವಂತವಾಗಿ ಹಿಂದೆ ಕರೆದುಕೊಂಡು ಹೋಗಿ ಕಟ್ ಮಾಡಿದ ರೀತಿ ಮಾಡಲ್ಲ ಎಂದು ಸಂಜಯ್ ಗಾಂಧಿ ಉದಾಹರಣೆ ನೀಡಿದರು.
ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ. ಟಿ ರವಿ, ಅಸಮಾನತೆ, ನಿರುದ್ಯೋಗ ಎಲ್ಲವನ್ನೂ ಸ್ವೀಕರಿಸುತ್ತೇವೆ. ಸದುದ್ದೇಶದಿಂದ ಏನೇ ಹೇಳಿದರೂ ಸ್ವೀಕರಿಸ್ತೇವೆ. ಅಸಮಾನತೆ, ಬಡತನ ಇವೆಲ್ಲ ವಿಶ್ವಗುರು ಆಗಲು ಇರೋ ಅಡೆತಡೆಗಳು. ಇವೆಲ್ಲಾ ತೊಡೆದು ಹೋದರೆ ವಿಶ್ವಗುರು ಆಗಬಹುದು.
ಪ್ರಜಾಪ್ರಭುತ್ವ ವ್ಯವಸ್ಥೆ ಕಾಂಗ್ರೆಸ್ನಲ್ಲಿ ಇಲ್ಲ: ಜಾತೀಯತೆ ಮೂಲಕ ಓಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ನೋಡುತ್ತಿದ್ದಾರೆ. ಹೀಗಿದ್ದಾಗಲೇ ಅಸ್ಪೃಶ್ಯತೆ ಹೆಚ್ಚಾಗಲು ಕಾರಣವಾಗುತ್ತದೆ. ಅದನ್ನ ಹೋಗಲಾಡಿಸಲು ಸರ್ಕಾರದ ಮಟ್ಟದಲ್ಲಿ ಹಾಗೂ ಬಿಜೆಪಿ ಪಕ್ಷದಿಂದ ನಿರ್ಣಯ ತೆಗೆದುಕೊಳ್ಳುತ್ತೇವೆ. ಆದರೆ, 55 ವರ್ಷ ಆಳ್ವಿಕೆ ನಡೆಸಿದ ಪಕ್ಷಕ್ಕೆ ಅಸಮಾನತೆ ಬಗ್ಗೆ ಹೇಳುವ ನೈತಿಕತೆ ಇಲ್ಲ, ನೆಹರೂ, ಇಂದಿರಾ ಹೇಳಿದ್ದೇ ಬಡತನ ನಿರ್ಮೂಲನೆ ಆದರೆ ಆಗಿದೆಯಾ? ಪ್ರಜಾಪ್ರಭುತ್ವ ವ್ಯವಸ್ಥೆ ಕಾಂಗ್ರೆಸ್ ನಲ್ಲಿ ಇಲ್ಲ ಎಂದರು.
ಇವರಿಗೆ ಸ್ವಾತಂತ್ರ್ಯ ಇಲ್ಲ: ಈಗ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಡ್ರಾಮಾ ನಡೆಯುತ್ತಿದೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಮ್ಮ ರಾಜ್ಯದವರು ಕೂಡ ಅಭ್ಯರ್ಥಿ ಆಗಿದ್ದಾರೆ. ಖರ್ಗೆ ಅವರು ತಾವೇ ಒಪ್ಪಿ ಆ ಸ್ಥಾನಕ್ಕೆ ಹೋಗಿಲ್ಲ. ಸೋನಿಯಾ ಕುಟುಂಬ ಒಪ್ಪಿದರೆ ಮಾತ್ರ ಇವರು ಅಧ್ಯಕ್ಷರಾಗಬಹುದು. ಇಲ್ಲದಿದ್ದರೆ ಅವರು ಆ ಸ್ಥಾನ ಪಡೆಯಲೂ ಆಗಲ್ಲ. ಸ್ವಂತ ನಿರ್ಣಯ ತೆಗೆದುಕೊಳ್ಳಲು ಇವರಿಗೆ ಸ್ವಾತಂತ್ರ್ಯ ಇಲ್ಲ. ಸೋನಿಯಾ ಗಾಂಧಿ ಮರ್ಜಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದ್ದಾರೆ.
ನಮ್ಮಲ್ಲಿ ಜೀತ ಪದ್ದತಿ ಇಲ್ಲ: ಖರ್ಗೆ ರಾಜಕೀಯ ಪ್ರವೇಶ ಮಾಡದಿದ್ದಾಗ ಸೋನಿಯಾ ಭಾರತದಲ್ಲೇ ಇರಲಿಲ್ಲ. ಅಂತಹ ಖರ್ಗೆ ಈಗ ಸೋನಿಯಾ ಮರ್ಜಿಗೆ ಒಳಪಡುವ ದುಃಸ್ಥಿತಿಯಲ್ಲಿದ್ದಾರೆ. ಇದು ಖರ್ಗೆ ವ್ಯಕ್ತಿತ್ವಕ್ಕೆ ಸರಿಯಲ್ಲ, ನಮ್ಮಲ್ಲಿ ಜೀತ ಪದ್ದತಿ ಇಲ್ಲ, ಆ ಮಾನಸಿಕತೆಯೂ ಇರಬಾರದು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಹಸನವನ್ನು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ತಲೆ ಎತ್ತಲ್ಲ : ಭಾರತ್ ಜೋಡೋ ಪಾದಯಾತ್ರೆ ಕಾಂಗ್ರೆಸ್ ವಿಚತಲಿತವಾಗಿರುವ ಭಾಗವಾಗಿದೆ. ಹಲವು ರಾಜ್ಯದಲ್ಲಿ ಜಾಗ ಖಾಲಿ ಮಾಡಿದೆ. ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸ್ ತಲೆ ಎತ್ತಲ್ಲ ಎನ್ನುವ ವಿಶ್ವಾಸವಿದೆ. ಯುಪಿಗೆ ಕಾಲಿಟ್ಟರು, ಅಲ್ಲಿ ಕಾಂಗ್ರೆಸ್ ಠೇವಣಿ ಹೋಯಿತು. ಕೇರಳಕ್ಕೆ ಕಾಲಿಟ್ಟರು ಅಲ್ಲಿ ಎಲ್ಡಿಎಫ್ ಮರು ಆಯ್ಕೆ ಆಯಿತು. ಈಗ ಕರ್ನಾಟಕಕ್ಕೆ ಕಾಲಿಟ್ಟಿದ್ದಾರೆ. ಇಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅವರು ಜೋಡೋದಲ್ಲಿ ಮತ್ತಷ್ಟು ರಾಜ್ಯ ಬಿಟ್ಟಿದ್ದಾರೆ. ಅದನ್ನೂ ಸೇರಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಬಹಳ ಶಕ್ತಿಯಾಗಿದ್ದರೆ ಲೋಕಸಭೆಯಲ್ಲಿ 28 ರಲ್ಲಿ 25 ಸ್ಥಾನ ಬಿಜೆಪಿ ಯಾಕೆ ಗೆದ್ದಿದೆ. ಇದನ್ನು ನೋಡಿದರೆ ಯಾರು ಸ್ಟ್ರಾಂಗ್ ಇದ್ದಾರೆ ಎನ್ನುವುದು ಗೊತ್ತಾಗಲಿದೆ. ನಾವು ಇನ್ನು ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ಹಾಸನ, ಬೆಂಗಳೂರು ಗ್ರಾಮಾಂತರವನ್ನೂ ಗೆಲ್ಲುತ್ತಿದ್ದೆವು ಎಂದರು.
ಸಿಎಂ ನಿರ್ಧಾರ ಮಾಡಲಿದ್ದಾರೆ: ಮೇಸ್ತಾ ಕುಟುಂಬ ಈಗಾಗಲೇ ಸಾಕ್ಷ್ಯಾಧಾರ ನಾಶಪಡಿಸಿದ್ದಾರೆ ಎಂದಿದ್ದಾರೆ. ಅವರ ಕುಟುಂಬದ ಜೊತೆ ನಾವಿದ್ದೇವೆ. 32 ಜನರ ಹತ್ಯೆಯಾಗಿದೆ. ಅದರಲ್ಲಿ ಬಹಳ ಹತ್ಯೆ ರಾಜಕೀಯ ದುರುದ್ದೇಶ, ಹಿಂದೂ ಸಂಘಟನೆ ಗುರಿಯಾಗಿಸಿಕೊಂಡು ಹತ್ಯೆ ಮಾಡಿದ್ದಾರೆ ಎನ್ನುವ ವರದಿಯೂ ಬಂದಿದೆ. ಸಿದ್ದು ಆಳ್ವಿಕೆಯ ಐದು ವರ್ಷದ ಕರಾಳ ಅಧ್ಯಾಯದಲ್ಲಿ ಒಂದು ಪುಟದ್ದನ್ನು ತೆಗೆದುಕೊಂಡರೆ ಸಾಲದು. ಇನ್ನು 99 ಪುಟ ಬಾಕಿ ಇದೆ. ಡಿವೈಎಸ್ಪಿ ಗಣಪತಿ ಹೇಳಿಕೆ ಸಾರ್ವಜನಿಕ ಡೊಮೈನ್ ನಲ್ಲಿಯೂ ಇದೆ. ಸಂತೋಷ್ ಪಾಟೀಲ್ ಹತ್ಯೆ ಕೇಸ್ ಸಿಬಿಐಗೆ ವಹಿಸುವ ಕುರಿತ ಬೇಡಿಕೆ ಗೊತ್ತಿಲ್ಲ. ಈ ಬಗ್ಗೆ ಸಿಎಂ ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.
ನಮ್ಮಲ್ಲಿ ಯೋಗ್ಯತೆ ಮೇಲೆ ಸ್ಥಾನಮಾನ ಸಿಗಲಿವೆ. ನಮ್ಮ ಪಕ್ಷವನ್ನು ಆರಂಭದಲ್ಲಿ ಶೆಟ್ರು, ಭಟ್ರು ಪಕ್ಷ ಎನ್ನುತ್ತಿದ್ದರು. ಆದರೆ, ಇಂದು ಅಧಿಕಾರ ಯಾರ ಕೈಯಲ್ಲಿದೆ. ಪಿಎಂ, ರಾಷ್ಟ್ರಪತಿ ಹುದ್ದೆಯಲ್ಲಿ ಯಾರಿದ್ದಾರೆ?. ಜಾತೀಯತೆ ಆಧಾರಿತ ರಾಜಕಾರಣ ಬಿಜೆಪಿ ಮಾಡಲ್ಲ. ಸಂಘದ ಅಜೆಂಡಾವೂ ಅದಲ್ಲ. ಯಾವುದೇ ಸಂಘದ ಕಾರ್ಯಕರ್ತ ಯಾವ ಹುದ್ದೆಗೆ ಬೇಕಾದರೂ ಏರಬಹುದು. ತ್ಯಾಗ, ಸಮರ್ಪಣೆ ಆಧಾರದಲ್ಲಿ ಅದೆಲ್ಲಾ ನಿರ್ಧಾರವಾಗಲಿದೆ. ಸರಸಂಘಚಾಲಕ ಸ್ಥಾನ ಹುದ್ದೆಯಲ್ಲ. ಹಾಗಾಗಿ ಅರ್ಹತೆ ಮೇಲೆ ಯಾರು ಬೇಕಾದರೂ ಜವಾಬ್ದಾರಿ ನಿರ್ವಹಿಸಬಹುದಾಗಿದೆ ಎಂದು ಪರೋಕ್ಷವಾಗಿ ದಲಿತ ಸಿಎಂ ವಿಚಾರವನ್ನು ತಳ್ಳಿಹಾಕಿದರು.
ಪರ್ಸಂಟೇಜ್ ಅಭಿಯಾನ ಟೂಲ್ ಕಿಟ್ನ ಒಂದು ಭಾಗ. ಯಾರು ಲೋಕಾಯುಕ್ತವನ್ನು ಹಲ್ಲುಕಿತ್ತ ಹಾವು ಮಾಡಿದ್ದರೋ ಅವರು ಇಂದು ಆರೋಪ ಮಾಡುತ್ತಿದ್ದಾರೆ. 10 ಪರ್ಸೆಂಟ್ ಇರಲಿ, 40 ಪರ್ಸೆಂಟ್ ಇರಲಿ ಈ ಬಗ್ಗೆ ದೂರು ಕೊಡಬಹುದು. ಯಾರು ಬೇಕಾದರೂ ದೂರು ಸಲ್ಲಿಸಬಹುದು. ಲೋಕಾಯುಕ್ತ, ನ್ಯಾಯಾಲಯ ಅಪರಾಧಿ ಎಂದರೆ ನಾವು ಒಂದು ಕ್ಷಣವೂ ತಡಮಾಡದೆ ಹಿಂದೆ ಕ್ರಮ ಕೈಗೊಂಡಿದ್ದೇವೆ. ಈಗಲೂ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಓದಿ: ಆನೆಗೆ ಚಿಕಿತ್ಸೆ ನೀಡುವಂತೆ ರಾಹುಲ್ ಗಾಂಧಿ ಪತ್ರ: ಸ್ಪಂದಿಸಿದ ಸಿಎಂ ಬೊಮ್ಮಾಯಿ