ಬೆಂಗಳೂರು: ಕೇಂದ್ರಕ್ಕೆ ಯಾವುದೇ ತಪ್ಪು ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿಲ್ಲ. ಕೇಂದ್ರದ ಅನುದಾನ ವಾಪಸ್ ಹೋಗಬಾರದು ಎನ್ನುವ ಕಾರಣಕ್ಕೆ ಡ್ರಾ ಮಾಡಿ ಉದ್ದೇಶಿತ ಯೋಜನೆಗೆ ಮೀಸಲಿರಿಸಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ರವಿಕುಮಾರ್, ರಾಜ್ಯ ರೇಷ್ಮೋದ್ಯಮ ಆಯುಕ್ತರ ಕಚೇರಿಯಲ್ಲಿ ಅವ್ಯವಹಾರವಾಗಿದೆ ಎಂಬ ವಾದವಿದೆ. ಗಣಕೀಕರಣ ಯೋಜನೆಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಬಿಡುಗಡೆಯಾದ ಒಟ್ಟು ಅನುದಾನ 19.89 ಕೋಟಿ ರೂ. ಬಳಕೆಯಾಗಿಲ್ಲ. ಆದರೂ ಕೇಂದ್ರಕ್ಕೆ ಅನುದಾನ ಬಳಸಿರುವ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ತೋಟಗಾರಿಕಾ ಸಚಿವ ಆರ್. ಶಂಕರ್ ಅವರು, ಹಣವನ್ನು ನಾವು ನಮ್ಮ ಬಳಿ ಇರಿಸಿಕೊಂಡಿದ್ದೇವೆ. ಈಗ ಬಳಸಿಕೊಳ್ಳುತ್ತೇವೆ ಎಂದು ಸಮಜಾಯಿಷಿ ನೀಡಿದರು.
ಸಚಿವರ ನೆರವಿಗೆ ಧಾವಿಸಿದ ಡಿಸಿಎಂ ಕಾರಜೋಳ:
ಈ ವೇಳೆ ಸಚಿವರ ನೆರವಿಗೆ ಧಾವಿಸಿದ ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರದ ಬಜೆಟ್ ಹಂಚಿಕೆಯನ್ನು ಬಳಕೆ ಮಾಡಲು ಸಾಧ್ಯವಾಗದೇ ಇದ್ದಾಗ ಅದನ್ನು ಡ್ರಾ ಮಾಡಿ ಸರ್ಕಾರದಲ್ಲಿ ತೆಗೆದಿಟ್ಟಿದ್ದೇವೆ. ಗಣಕೀಕರಣಕ್ಕೆ, ಸಾಫ್ಟ್ ವೇರ್ ಅಭಿವೃದ್ಧಿಗೆ ತೆಗೆದಿರಿಸಲಾಗಿದೆ. ಕೇಂದ್ರದ ಅನುದಾನ ಹೋಗಬಾರದು ಎಂದು ಪಿಡಿ ಖಾತೆಯಲ್ಲಿ ಇರಿಸಲಾಗುತ್ತದೆ. ತಪ್ಪು ಮಾಹಿತಿಯನ್ನು ಕೇಂದ್ರಕ್ಕೆ ಕಳುಹಿಸಿಲ್ಲ. ಉದ್ದೇಶಿತ ಯೋಜನೆ ಬಳಕೆಗಾಗಿ ಹಣ ಮೀಸಲಿಡಲಾಗಿದೆ ಎಂದರು.
ಅಂಗನವಾಡಿಗೆ ಹೊಸ ಕಟ್ಟಡ:
ಶಾಸಕರು ಪ್ರಸ್ತಾವನೆ ಸಲ್ಲಿಸಿದಲ್ಲಿ ಹಣಕಾಸು ಲಭ್ಯತೆ ನೋಡಿಕೊಂಡು ಅಂಗನವಾಡಿಗಳಿಗೆ ಹೊಸ ಕಟ್ಟಡ ನಿರ್ಮಾಣ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದರು. ಪ್ರಶ್ನೋತ್ತರ ಕಲಾಪದಲ್ಲಿ ಅಂಗನವಾಡಿ ಕಟ್ಟಡ ಹಾಗೂ ಪೌಷ್ಠಿಕ ಆಹಾರ ಕುರಿತು ವಿಜಯಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪುಷ್ಠಿ ನ್ಯೂಟ್ರಿಮಿಕ್ಸ್ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿದೆ. ಬೀದರ್ ಜಿಲ್ಲೆಯಲ್ಲಿ 1,893 ಅಂಗನವಾಡಿ ಕೇಂದ್ರ ಮಂಜೂರಾಗಿದ್ದು, 1,301 ಅಂಗನವಾಡಿಗಳು ಮಾತ್ರ ಸ್ವಂತ ಕಟ್ಟಡದಲ್ಲಿವೆ. ಉಳಿದೆಡೆ ಕಟ್ಟಡ ನಿರ್ಮಾಣಕ್ಕೆ ಶಾಸಕರು ಪ್ರಸ್ತಾವನೆ ಸಲ್ಲಿಸಿದಲ್ಲಿ ಹಣಕಾಸು ಲಭ್ಯತೆ ನೋಡಿಕೊಂಡು ಹೊಸ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಭರವಸೆ ನೀಡಿದರು.
ನೂತನ ರೈಲು ಮಾರ್ಗ:
ಡಿಪಿಆರ್ ಸಿದ್ಧಗೊಂಡ ನಂತರ ಧಾರವಾಡ-ಬೆಳಗಾವಿ ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಮಹಾಂತೇಶ್ ಕವಟಗಿಮಠ ಪ್ರಶ್ನೆಗೆ ಆನಂದ ಸಿಂಗ್ ಬದಲು ಉತ್ತರಿಸಿದ ಸಚಿವರು, ಧಾರವಾಡ-ಬೆಳಗಾವಿ ನಡುವೆ ರೈಲು ಮಾರ್ಗ ನಿರ್ಮಾಣಕ್ಕೆ 988 ಕೋಟಿ ರೂ. ಯೋಜನಾ ವೆಚ್ಚ ಸಿದ್ಧಪಡಿಸಲಾಗುತ್ತಿದೆ. 494.15 ಕೋಟಿ ರೂ. ಅನ್ನು ರಾಜ್ಯ ಭರಿಸಬೇಕಿದೆ. 335 ಎಕರೆ ಜಮೀನು ಅಗತ್ಯವಿದ್ದು, ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗುತ್ತದೆ. ಯೋಜನೆ ಮಂಜೂರಾಗಿದ್ದು ಡಿಪಿಆರ್ ಸಿದ್ಧವಾದ ನಂತರ ಯೋಜನೆ ಪ್ರಾರಂಭ ಮಾಡಲಿದ್ದೇವೆ ಎಂದರು.
ಕೃಷಿ ವಿವಿ ಹುದ್ದೆ ಭರ್ತಿ:
ಆದಷ್ಟು ಬೇಗ ರಾಜ್ಯದ ಕೃಷಿ ವಿವಿಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಸಂಕನೂರು, ರಾಜ್ಯದ ನಾಲ್ಕೂ ಕೃಷಿ ವಿವಿ ಗಳಲ್ಲಿ ಶೇ 50ಕ್ಕೂ ಹೆಚ್ಚು ಹುದ್ದೆ ಖಾಲಿ ಇರುವ ಹುದ್ದೆ ಭರ್ತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಕೃಷಿ ವಿವಿಯಲ್ಲಿ 1,230, ಧಾರವಾಡ ಕೃಷಿ ವಿವಿಯಲ್ಲಿ 883, ರಾಯಚೂರು ಕೃಷಿ ವಿವಿಯಲ್ಲಿ 811 ಮತ್ತು ಶಿವಮೊಗ್ಗ ಕೃಷಿ ವಿವಿಯಲ್ಲಿ 588 ಬೋಧಕ, ಬೋಧಕೇತರ ಹುದ್ದೆಗಳು ಖಾಲಿ ಇರುವುದು ಸತ್ಯ. ಕೊರೊನಾ ಕಾರಣದಿಂದ ನೇಮಕ ಮಾಡಿರಲಿಲ್ಲ. ಸಿಎಂ ಭೇಟಿ ಮಾಡಿ ವಿಶೇಷ ಪ್ರಸ್ತಾವನೆ ಮಾಡಿ ಆದಷ್ಟು ಬೇಗ ಹುದ್ದೆ ಭರ್ತಿ ಮಾಡಲಾಗುತ್ತದೆ ಎಂದರು. ಈ ವೇಳೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಫೈಲ್ ತೆಗೆದುಕೊಂಡು ಹೋಗಿ ಸಿಎಂ ಅವರಿಂದ ಸಹಿ ಮಾಡಿಸಿಕೊಂಡು ಬನ್ನಿ ಎಂದು ಸೂಚನೆ ನೀಡಿದರು.