ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ನ ಎರಡನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ವರದಿ ಕುರಿತಂತೆ ತಜ್ಞರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ತಜ್ಞರು ನೀಡಿರುವ ವರದಿ ಇನ್ನೂ ಕೈಸೇರಿಲ್ಲ, ಅದು ಅಧಿಕಾರಿಗಳ ಮಟ್ಟದಲ್ಲಿದೆ. ಆ ವರದಿ ಮತ್ತು ಮುಂದೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಮಿತಿ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಜತೆ ನಾಳೆ ಸಭೆ ನಡೆಸಲಾಗುವುದು. ಸಭೆ ತೀರ್ಮಾನಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವ ಸಹೋದ್ಯೋಗಿಗಳ ಜತೆ ಸಮಾಲೋಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಕೋವಿಡ್‌ನ ಎರಡನೇ ಅಲೆ ಪರಿಣಾಮಕಾರಿಯಾಗಿರುತ್ತದೆ ಎಂದು ವೈಯಕ್ತಿಕವಾಗಿ ತಮಗೆ ಅನ್ನಿಸುತ್ತಿಲ್ಲ. ಆದರೂ ತಜ್ಞರು ನಡೆಸಿರುವ ಅಧ್ಯಯನ ವರದಿಯಲ್ಲಿ ಏನಿದೆ ಎಂಬುದನ್ನು ಪರಶೀಲಿಸಬೇಕಿದೆ. ಯಾವ ಮಟ್ಟದ ಪರಿಣಾಮ? ಯಾವ್ಯಾವ ಪ್ರದೇಶಗಳಲ್ಲಿ ಹೇಗಿರುತ್ತದೆ? ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಈ ಎಲ್ಲಾ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಎಚ್ಚರಿಕೆಯ ಹೆಜ್ಜೆ ಇರಿಸಲಾಗುವುದು ಎಂದರು.
ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್ ಶಾಶ್ವತ ಪರಿಹಾರ ಅಲ್ಲ. ಸಾಮಾಜಿಕ ಲಸಿಕೆ ಎಂದೇ ಹೇಳಲಾಗಿರುವ ಮಾಸ್ಕ್, ಸಾಮಾಜಿಕ ಅಂತರ ಮತ್ತು ಶುಚಿತ್ವ ಲಸಿಕೆಗಿಂತಲೂ ಹೆಚ್ಚು ಪರಿಣಾಮಕಾರಿ ಎಂಬುದನ್ನು ತಜ್ಞರೇ ಹೇಳಿದ್ದಾರೆ. ಇತರ ರಾಷ್ಟ್ರಗಳ ಸ್ಥಿತಿಗತಿಗಳನ್ನೂ ಗಮನಿಸಲಾಗುತ್ತಿದೆ. ಯೂರೋಪ್‌ನಲ್ಲಿ ಲಾಕ್‌ಡೌನ್ ಮಾಡಿದ್ದರೂ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಸರ್ಕಾರದ ಸೂಚನೆಗಳನ್ನು ಜನರು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಅದಕ್ಕಿಂತ ಬೇರೆ ಲಸಿಕೆ ಅಗತ್ಯವಿಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
ಸಂಭ್ರಮಾಚರಣೆ ಅಗತ್ಯ ಏನಿದೆ? :
ಹೊಸ ವರ್ಷ ಮತ್ತು ಕ್ರಿಸ್ಮಸ್ ಹಿನ್ನೆಲೆಯಲ್ಲಿ ಬಿಗಿ ಕ್ರಮ ಜಾರಿಗೊಳಿಸುವ ಬಗ್ಗೆಯೂ ತಜ್ಞರ ಜತೆ ಚರ್ಚಿಸಲಾಗುವುದು. ಇದು ಭಾರತೀಯ ಕ್ಯಾಲೆಂಡರ್‌ನ ಹೊಸ ವರ್ಷ ಅಲ್ಲ. ಯುಗಾದಿ ನಮ್ಮ ಹೊಸ ವರ್ಷ. ಎಲ್ಲಕ್ಕಿಂತ ಮಿಗಿಲಾಗಿ ಕೋವಿಡ್‌ನ ಸಂಕಷ್ಟ ಸ್ಥಿತಿಯಲ್ಲಿ ಸಂಭ್ರಮಾಚರಣೆ ಅಗತ್ಯವಾದರೂ ಏನಿದೆ? ನೂರಾರು ಜನರನ್ನು ಕಳೆದುಕೊಂಡಿದ್ದೇವೆ. ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ, ನೂರಾರು ಜನ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ, ಇನ್ನೂ ಪರಿಸ್ಥಿತಿ ಸುಧಾರಣೆ ಆಗಿಲ್ಲ, ಇಂಥ ಸನ್ನಿವೇಶದಲ್ಲಿ ಸಂಭ್ರಮದ ಅಗತ್ಯವಾದರು ಏಕೆ ಬೇಕು ಹೇಳಿ ಎಂದು ಪ್ರಶ್ನಿಸಿದರು.
ನಿರ್ಬಂಧಗಳ ಪ್ರಶ್ನೆಗೆ ಉತ್ತರಿಸಿ, ಸಣ್ಣ ಪ್ರದೇಶದಲ್ಲಿ ಹೆಚ್ಚು ಜನ ಸೇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗುವುದಿಲ್ಲ. ಜತೆಗೆ ಜನವರಿಯಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳುವ ಬಗ್ಗೆ ತಜ್ಞರು ಏನು ಹೇಳುತ್ತಾರೋ ಗೊತ್ತಿಲ್ಲ. ಹೀಗಾಗಿ ಎಲ್ಲಾ ವಿಷಯಗಳನ್ನು ಅವಲೋಕಿಸಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೊಸವರ್ಷ ಮತ್ತು ಕ್ರಿಸ್ಮಸ್ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ. ಕೆಲ ನಿರ್ಬಂಧಗಳ ಅವಶ್ಯಕತೆ ಇದೆ. ಆ ಬಗ್ಗೆ ಸಿಎಂ ಜತೆ ಚರ್ಚಿಸಿ ಪ್ರಕಟಿಸಲಾಗುವುದು. ಆದರೆ, ಕರ್ಫ್ಯೂ ಜಾರಿ ಅಗತ್ಯ ಇದೆ ಅನ್ನಿಸುತ್ತಿಲ್ಲ. ಆದರೂ ತಜ್ಞರ ಜತೆ ಚರ್ಚಿಸಿದ ಬಳಿಕವಷ್ಟೇ ಈ ಕುರಿತು ನಿರ್ಧರಿಸಲಾಗುವುದು ಎಂದರು.
ವಾರದೊಳಗೆ ಬಿಡುಗಡೆ :
ಇದೇ ಮೊದಲ ಸಲ ಕಡ್ಡಾಯ ಸೇವೆಗಾಗಿ ರಾಜ್ಯಾದ್ಯಂತ ರೆಸಿಡೆಂಟ್ ಡಾಕ್ಟರ್‌ಗಳನ್ನು ನಿಯೋಜಿಸಲಾಗಿದ್ದು, ಅವರಿಗೆ ವೇತನ ಬಿಡುಗಡೆ ಆಗಿಲ್ಲ ಎಂಬ ಸಂಗತಿ ಗಮನಕ್ಕೆ ಬಂದಿದೆ. ತಾಂತ್ರಿಕ ಕಾರಣಗಳಿಂದ ತಡವಾಗಿದೆ. ವಾರದೊಳಗಾಗಿ ವೇತನ ಬಿಡುಗಡೆ ಆಗಲಿದೆ. ಅಲ್ಲಿಯವರೆಗೆ ಆಯಾ ಕಾಲೇಜುಗಳ ಆಡಳಿತ ಮಂಡಳಿ ಅವರಿಗೆ ವೇತನ ನೀಡಲು ಸೂಚಿಸಲಾಗಿದೆ. ಹಣಕಾಸು ಇಲಾಖೆ ಜತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಿದ್ಧತೆ ಪೂರ್ಣಗೊಂಡಿದೆ:
ವ್ಯಾಕ್ಸಿನ್ ವಿತರಣೆ ಮತ್ತು ದಾಸ್ತಾನು ಸಂಬಂಧ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶೈತ್ಯಾಗಾರ, ವಿತರಣಾ ಸಿಬ್ಬಂದಿ ಸಹಿತ ಎಲ್ಲಾ ವಿಷಯಗಳ ಬಗ್ಗೆ ಅನೇಕ ಸುತ್ತುಗಳ ಸಮಾಲೋಚನೆ ಪೂರ್ಣಗೊಳಿಸಿದ್ದೇವೆ. ಹಿಂದೆ ಅನೇಕ ಸಲ ವ್ಯಾಕ್ಸಿನ್ ಬಳಕೆ ಮಾಡಿರುವ ಅನುಭವ ಇದೆ. ಕೋವಿಡ್ ಬರುವ ಮೊದಲಿಗಿಂತ ಈಗ ಮೂಲಸೌಕರ್ಯದಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಳ್ಳಲಾಗಿದೆ. ಅಂತಿಮವಾಗಿ ಯಾವ ವ್ಯಾಕ್ಸಿನ್? ಎಷ್ಟು ಪ್ರಮಾಣದಲ್ಲಿ ನೀಡಬೇಕು? ಯಾರಿಗೆ ನೀಡಬೇಕು ಎಂಬ ವಿಷಯಗಳು ಇತ್ಯರ್ಥ ಆದ ಬೆನ್ನಲ್ಲೇ ವ್ಯಾಕ್ಸಿನ್ ವಿತರಣೆ ವ್ಯವಸ್ಥಿತವಾಗಿ ನಡೆಯಲಿದೆ ಎಂದರು.
ವಿಶ್ವನಾಥ್ ಒಂಟಿಯಲ್ಲ :
ವಿಶ್ವನಾಥ್ ಅವರು ಒಂಟಿಯಲ್ಲ. ಮುಖ್ಯಮಂತ್ರಿ ಸಹಿತ ನಾವು ಹದಿನೇಳು ಮಂದಿಯೂ ಅವರ ಜತೆಗಿದ್ದೇವೆ. ನಾವೆಲ್ಲರೂ ಈಗ ಬಿಜೆಪಿ ಕಾರ್ಯಕರ್ತರೇ ಆಗಿದ್ದೇವೆ. ಅವರನ್ನು ಏಕಾಂಗಿಯಾಗಿಸುವ ಪ್ರಶ್ನೆಯೇ ಇಲ್ಲ ಎಂದು ಡಾ. ಕೆ. ಸುಧಾಕರ್ ಹೇಳಿದರು.
ವೈಯಕ್ತಿಕವಾಗಿ ನೋವು ಆದಾಗ ಕೆಲವರು ಭಾವಾವೇಶದಲ್ಲಿ ಮಾತನಾಡುವುದು ಸಹಜ. ವಿಶ್ವನಾಥ್ ಅವರು ಅದೇ ರೀತಿ ಮಾತನಾಡಿರಬಹುದು. ಅವರು ಹಿರಿಯರು, ಮೇಲಾಗಿ ಬರಹಗಾರರು. ಅವರೊಂದಿಗೆ ನಾವೆಲ್ಲಾ ಇದ್ದೇವೆ ಎಂದು ವಿನಂತಿ ಮಾಡಿದ್ದೇನೆ. ಹೈಕೋರ್ಟ್ ತೀರ್ಪು ಅಂತಿಮವೇನಲ್ಲ. ಸುಪ್ರೀಂಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.