ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ನಲ್ಲಿ ಭಾಗಿಯಾದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು, ಸರ್ಕಾರಕ್ಕೆ ಪೂರಕವಾಗಿ ಈ ಬಂದ್ ನಡೆಯುತ್ತಿದೆ. ನಮ್ಮ ಪರ ನಿಲ್ಲಬೇಕಿದ್ದ ಸರ್ಕಾರ ನಮ್ಮನ್ನು ವಶಕ್ಕೆ ಪಡೆಯುವ ಮೂಲಕ ಉದ್ಧಟತನ ತೋರುತ್ತಿದೆ ಎಂದು ಕಿಡಿಕಾರಿದ್ದಾರೆ.
'ಬ್ರ್ಯಾಂಡ್ ಬೆಂಗಳೂರು ಬ್ರ್ಯಾಂಡಿ ಬೆಂಗಳೂರು': "ನೀರನ್ನು ನಿಲ್ಲಿಸಿ, ಸದನ ಕರೆದು ನಿರ್ಣಯ ಮಾಡಿ, ನೀರನ್ನು ಬಿಡಲು ಸಾಧ್ಯವಿಲ್ಲವೆಂದು ಹೇಳಿ. ಎಲ್ಲರೂ ಜೈಲಿಗೆ ಹೋಗಲು ಸಿದ್ಧವಾಗೋಣ. ಕುಡಿಯೋಕೆ ನೀರಿಲ್ಲದ ಈ ಸಂದರ್ಭದಲ್ಲಿ ಇಂಥ ವಿಚಾರಗಳು ಚರ್ಚೆಯಾಗಬೇಕಿತ್ತು. ಆದರೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ, ಅದನ್ನು ಸರಿದೂಗಿಸಲು ನೂರಾರು ಮದ್ಯದಂಗಡಿ ತೆರೆಯುತ್ತೇವೆ ಎಂದು ಸರ್ಕಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಕುಡಿಯುವ ನೀರಿಲ್ಲದೇ ಬೀದಿ ಬೀದಿಯಲ್ಲಿ ಹೆಣಗಳು ಬೀಳುವ ಪರಿಸ್ಥಿತಿ ಇರುವಾಗ ನೀರು ಕೊಡಿ ಅಂದರೆ ಸಾರಾಯಿ ಕೊಡುತ್ತೇವೆ ಎನ್ನುತ್ತಿದ್ದೀರಿ. ಬ್ರ್ಯಾಂಡ್ ಬೆಂಗಳೂರು ಅನ್ನು ಬ್ರ್ಯಾಂಡಿ ಬೆಂಗಳೂರು ಮಾಡಲು ಹೊರಟಿದ್ದೀರಿ. ಸರ್ಕಾರ ದಯವಿಟ್ಟು ನೀರಿನ ಬೆಂಗಳೂರು ಮಾಡಲಿ" ಎಂದು ಆಕ್ರೋಶ ಹೊರಹಾಕಿದರು.
ಸಂಘಟನೆಗಳು ಐದು ಬೆರಳಿನಂತೆ, ಒಂದೇ ರೀತಿ ಇರಲು ಸಾಧ್ಯವಿರಲ್ಲ: ಬಂದ್‌ಗೆ ಕರೆ ನೀಡಿರುವ ಸಂಘಟನೆಗಳಲ್ಲಿ ಒಮ್ಮತದ ಕೊರತೆಯ ಕುರಿತು ಇದೇ ಸಂದರ್ಭದಲ್ಲಿ ಮಾತನಾಡಿ, "ಐದು ಬೆರಳು ಒಂದೇ ರೀತಿ ಇರಲ್ಲ, ಆದರೆ ಕೈ ಒಂದೇ. ಸಂಘಟನೆಗಳು ಹಾಗೆಯೇ, ನಾನಾ ಕಾರಣಗಳಿಗೆ ನಾನಾ ನಾಯಕತ್ವಗಳಿಂದ ಒಮ್ಮತ ಇರದಿರಬಹುದು. ಆದರೆ ನಾವೆಲ್ಲರೂ ಅಣ್ಣ- ತಮ್ಮಂದಿರಿದ್ದಂತೆ. ನಾವು ತುರ್ತಾಗಿ ಇಂದು ಬಂದ್‌ಗೆ ಕರೆ ನೀಡಲು ಕಾರಣ ಇಂದು ಪ್ರಕರಣ ನ್ಯಾಯಾಲಯದಲ್ಲಿ ಮುಂದೆ ಬರುತ್ತಿದೆ. ಅವರ ಗಮನ ಸೆಳೆಯಬಹುದು ಎಂವುದು ನಮ್ಮ ಬಂದ್ನ ಉದ್ದೇಶ" ಎಂದರು.
"ನಾವು ಶಾಂತಿಯುತವಾದ ಬಂದ್‌ಗೆ ಕರೆ ನೀಡಿದ್ದೇವೆ. ಬಲವಂತವಾಗಿ ಯಾರನ್ನೂ ಬಂದ್ ಮಾಡಿ ಎಂದು ಹೇಳಿಲ್ಲ. ಸ್ವಯಂಪ್ರೇರಿತವಾಗಿ ಜನರೇ ಭಾಗಿಯಾಗುತ್ತಿದ್ದಾರೆ. ನಾಲ್ಕು ಮೂರು ಐದುನೂರು ಸಂಘಟನೆಗಳು ಬೆಂಬಲ ಸೂಚಿಸಿವೆ. ಇಂಥಹ ಸಂದರ್ಭದಲ್ಲಿ ನಮಗೆ ಬೆಂಬಲವಾಗಿರಬೇಕಿದ್ದ ಸರ್ಕಾರ ಅಡ್ಡಿಪಡಿಸುವ ಮೂಲಕ ಉದ್ಧಟತನ ತೋರುತ್ತಿದೆ. ನೀವೇನೆ ಹೋರಾಟ ಹತ್ತಿಕ್ಕಿದರು, ನಾವು ನಿಲ್ಲಿಸುವುದಿಲ್ಲ" ಎಂದು ತಿಳಿಸಿದರು.
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಂದ್ ಯಶಸ್ವಿ: ನಾಲ್ಕು ಬಿಬಿಎಂಪಿ ವಾರ್ಡ್‌ಗಳಲ್ಲಿ ಅಂಗಡಿ ಮುಂಗಟ್ಟನ್ನು ಮುಚ್ಚಿ ವ್ಯಾಪಾರಸ್ಥರು ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಕರೆಕೊಟ್ಟ ಬೆಂಗಳೂರು ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಶಾಲಾ- ಕಾಲೇಜುಗಳು ಹಾಗೂ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಾವೇರಿ ಪ್ರತಿಭಟನೆ ಜೋರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೆಎಸ್ಆರ್ಪಿ, ಆರ್ಎಎಫ್, ವಾಟರ್ ಜೆಟ್, ದಂಗೆ ನಿಯಂತ್ರಣ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ವಶಕ್ಕೆ ಪಡೆದ ಪ್ರತಿಭಟನಾಕಾರರನ್ನು ಸ್ಥಳಾಂತರಿಸಲು ಬಿಎಂಟಿಸಿ ಬಸ್ಸುಗಳ ವ್ಯವಸ್ಥೆ ಹಾಗೂ ಸಕಲ ರೀತಿಯಲ್ಲೂ ಬಂದೋಬಸ್ತ್ ವ್ಯವಸ್ಥೆಯನ್ನು ಖಾಕಿ ಪಡೆ ಮಾಡಿಕೊಂಡಿದೆ.
ಇದನ್ನೂ ಓದಿ: ಕಾವೇರಿ: ಪ್ರತಿಭಟನಾಕಾರರು ಪೊಲೀಸರ ವಶಕ್ಕೆ, ಬೆಂಗಳೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ