ಬೆಂಗಳೂರು : ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ ಬಿ ಜಯಚಂದ್ರ ಆಯ್ಕೆಯಾಗಿದ್ದಾರೆ. ಆರ್ ಆರ್ ನಗರ ಕ್ಷೇತ್ರದಲ್ಲೂ ಪ್ರಬಲ ಅಭ್ಯರ್ಥಿಯನ್ನೇ ಆಯ್ಕೆ ಮಾಡೋದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ಘೋಷಣೆ ಆಗಿದೆ. ನಾವು ಉಪ ಚುನಾವಣೆಗೆ ತಯಾರಾಗಿದ್ದೇವೆ. ಎಲ್ಲ ನಾಯಕರ ಜೊತೆ ಚರ್ಚೆ ಮಾಡಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ನಾವು ಉಪ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸ್ವಂತ ಬಲ ಇದೆ, ನಾವು ಸ್ವತಂತ್ರ ಸ್ಪರ್ಧೆ ಮಾಡುತ್ತೇವೆ ಎಂದರು.
ಶಿರಾದಿಂದ ಸತ್ಯನಾರಾಯಣ ಗೆದ್ದಿದ್ದರು. ಅವರ ನಿಧನದಿಂದಾಗಿ ಅಲ್ಲಿ ಚುನಾವಣೆ ನಡೆಯಲಿದೆ. ಆರ್‌ಆರ್‌ನಗರದಿಂದ ಮುನಿರತ್ನ ರಾಜೀನಾಮೆ ಕೊಟ್ಟಿದ್ದರು. ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಕೊರತೆಯಿಲ್ಲ, ಒಂದೊಂದು ಕ್ಷೇತ್ರದಲ್ಲಿ ಎಂಟು ಮಂದಿ ಇದ್ದಾರೆ ಎಂದರು.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ವಿಚಾರ ಮಾತನಾಡಿ, ಮೊನ್ನೆ ಸಚಿವ ಕೆ ಎಸ್ ಈಶ್ವರಪ್ಪ ಮನೆಯಲ್ಲಿ ಸಭೆ ಮಾಡಿದ್ದಾರೆ. ಆದರೆ, ನಾನು ಎಲ್ಲಿಗೂ ಹೋಗಿಲ್ಲ. ಯಾಕಂದ್ರೆ, ಅವರು ನನ್ನನ್ನು ಕರದೇ ಇಲ್ಲ. ನಾನು ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವವನು, ಕರೆದರೆ ಹೋಗಿ ಈ ಬಗ್ಗೆ ಚರ್ಚಿಸುತ್ತಿದ್ದೆ ಎಂದರು. ಯಾದಗಿರಿ, ಬೀದರ್, ಕಲಬುರಗಿಯಲ್ಲಿ ಗೊಂಡ, ರಾಜಗೊಂಡ ಎಸ್ಟಿಗೆ ಸೇರಿಸುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಈಶ್ವರಪ್ಪ ಅದನ್ನು ಮೊದಲು ಮಾಡಿಸಲಿ ಎಂದರು.