ಬೆಂಗಳೂರು : ಮನೆ ಮನೆಗೆ ‘ಗಂಗಾ ಯೋಜನೆ ’ಎಂಬ ಹೊಸ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಪ್ರತಿ ಮನೆ ಮನೆಗೂ ಗಂಗಾ ಯೋಜನೆಯಡಿ ಕೊಳಾಯಿ (ನಲ್ಲಿ) ಕೊಡಲು ತೀರ್ಮಾನ ಮಾಡಿದ್ದೇವೆ. ಇನ್ನೊಂದು ತಿಂಗಳಲ್ಲಿ ಈ ಯೋಜನೆ ಒಂದು ಹಂತಕ್ಕೆ ಬರಲಿದೆ ಎಂದು ಹೇಳಿದರು. ಇನ್ನು ಕೇಂದ್ರ ಸರ್ಕಾರ ಇದಕ್ಕೆ ಎಷ್ಟು ಅನುದಾನ ಕೊಡುತ್ತದೆ ಮತ್ತು ರಾಜ್ಯ ಸರ್ಕಾರದಿಂದ ಎಷ್ಟು ಭರಿಸಬೇಕು ಎಂಬುವುದರ ಕುರಿತು ಚರ್ಚೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ನೀಡುವುದು ಈ ಯೋಜನೆಯ ಉದ್ದೇಶ. ಪೈಪ್ಗಳ ಮೂಲಕ ಮನೆ ಮನೆಗೆ ಕೊಳಾಯಿ ಹಾಕಿ ನೀರು ಸರಬರಾಜು ಮಾಡಲಾಗುತ್ತದೆ. ತಿಂಗಳಿಗೆ ಇಂತಿಷ್ಟು ಶುಲ್ಕ ವಿಧಿಸಲಾಗುತ್ತದೆ. ಸರ್ಕಾರವೇ ನೀರು ಬಿಡುವ ನಿರ್ವಹಣೆ ಮಾಡುವುದರಿಂದ ಹೆಚ್ಚು ನೀರು ಪೋಲಾಗದಂತೆ ತಡೆಯಬಹುದು ಎಂದು ಹೇಳಿದರು.
ರಾಜ್ಯದ 6,021 ಗ್ರಾಮ ಪಂಚಾಯಿತಿಗಳಿಗೆ ಸೋಲಾರ್ ಅಳವಡಿಕೆ, ತ್ಯಾಜ್ಯ ಸಂಸ್ಕರಣ ಘಟಕಗಳ ಸ್ಥಾಪನೆಗೆ ನಿರ್ಧಾರ ಮಾಡಲಾಗಿದ್ದು, ಆ ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಭೂಮಿ ಕೊಡುತ್ತಿದ್ದೇವೆ. ಘನತ್ಯಾಜ್ಯಕ್ಕೆ ಕಾಮಗಾರಿ ಕೂಡ ಶುರು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ಶುದ್ಧ ಕುಡಿಯವ ನೀರಿನ ಘಟಕಗಳ ಬಗ್ಗೆ ಬಹಳಷ್ಟು ದೂರುಗಳು ಬಂದಿವೆ. ಹೀಗಾಗಿ ತನಿಖೆ ಮಾಡಿಸಲು ಒಂದು ಏಜೆನ್ಸಿ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.