ಬೆಂಗಳೂರು: ಸರ್ಕಾರಿ ನಿವಾಸ ಕಾವೇರಿಯನ್ನು ಖಾಲಿ ಮಾಡಲು ಮೀನಮೇಷ ಎಣಿಸುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ಬಲವಂತವಾಗಿ ನಿವಾಸ ಖಾಲಿ ಮಾಡಿಸಲು ಸರ್ಕಾರ ಮುಂದಾಗಿದೆ. ತಕ್ಷಣ ಮನೆ ಖಾಲಿ ಮಾಡದೇ ಇದ್ದರೆ ನೀರು, ವಿದ್ಯುತ್ ಪೂರೈಕೆ ಸ್ಥಗಿತ ಮುನ್ಸೂಚನೆಯನ್ನು ಲೋಕೋಪಯೋಗಿ ಇಲಾಖೆ ನೀಡಿದೆಯೆಂದು ಉನ್ನತ ಮೂಲಗಳು ಈಟಿವಿ ಭಾರತ್ಗೆ ಖಚಿತಪಡಿಸಿವೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಸವಿರುವ ಸರ್ಕಾರಿ ನಿವಾಸವನ್ನು ಖಾಲಿ ಮಾಡಿಸಲೇಬೇಕೆಂದು ಪಟ್ಟು ಹಿಡಿದಿರುವ ರಾಜ್ಯ ಸರ್ಕಾರ ಮೊದಲ ಹಂತವಾಗಿ ಸಿದ್ದರಾಮಯ್ಯ ಅವರ ಮನೆ ಮುಂದೆ ಹಾಕಲಾಗಿದ್ದ ನಾಮಫಲಕವನ್ನು ತೆರವುಗೊಳಿಸುವ ಮೂಲಕ ಕಠಿಣ ಸಂದೇಶ ರವಾನಿಸಿದೆ ಎನ್ನಲಾಗಿದೆ. ಇಷ್ಟರ ನಂತರವೂ ಸಿದ್ದರಾಮಯ್ಯ ಮನೆ ಖಾಲಿ ಮಾಡದೇ ಇದ್ದರೆ ಕಠಿಣ ಕ್ರಮವಾಗಿ ನಿವಾಸಕ್ಕೆ ಕಾರ್ಪೊರೇಷನ್ ನೀರು ಮತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವ ನಿರ್ಧಾರಕ್ಕೂ ಸಹ ಕಾವೇರಿ ಬಂಗಲೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಲೋಕೋಪಯೋಗಿ ಇಲಾಖೆ ಮುಂದಾಗಿದೆಯೆಂದು ಹೇಳಲಾಗಿದೆ.
ಉಪ ಚುನಾವಣೆವರೆಗೂ ಕಾವೇರಿ ವಾಸ್ತವ್ಯ: ಸಿದ್ದರಾಮಯ್ಯ ಬೇಡಿಕೆ ತಿರಸ್ಕಾರ
ಸದ್ಯ ನಾಮಫಲಕವನ್ನು ತೆರವುಗೊಳಿಸಿ ಕಾವೇರಿ ನಿವಾಸದ ಆವರಣದಲ್ಲಿ ಬದಲಾವಣೆ, ನವೀಕರಣದಂತಹ ಕೆಲಸ ಕೈಗೆತ್ತಿಕೊಳ್ಳಲಾಗಿದ್ದು, ಸಿದ್ದರಾಮಯ್ಯ ನಿವಾಸ ತೆರವು ಮಾಡುತ್ತಿದ್ದಂತೆ ಬಣ್ಣ ಹಚ್ಚುವ ಕೆಲಸ, ಪೀಠೋಪಕರಣ ಬದಲಾವಣೆ ಇತ್ಯಾದಿ ಕೆಲಸ ಕಾರ್ಯವನ್ನು ಪೂರೈಸಿ ನಿವಾಸವನ್ನು ಸಿಎಂ ವಾಸ್ತವ್ಯಕ್ಕೆ ಅಣಿ ಮಾಡಲಾಗುತ್ತದೆ.
ಕಾವೇರಿ ನಿವಾಸದ ಬೇಡಿಕೆ ತಿರಸ್ಕರಿಸಿ ಬೇರೆ ನಿವಾಸ ಹಂಚಿಕೆ ಮಾಡಿದ್ದರೂ ಕಾವೇರಿ ತೆರವು ಮಾಡಲು ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದಾರೆ. ಈಗ ಹಂಚಿಕೆ ಮಾಡಿರುವ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್ -2 ರ ಆವರಣ ಕಡಿಮೆ ಇದ್ದು ಹೆಚ್ಚಿನ ಜನ ಸೇರಲು ಅವಕಾಶ ಇಲ್ಲ, ಹೆಚ್ಚು ವಾಹನ ನಿಲ್ಲಿಸಲು ಕಷ್ಟ, ಪಕ್ಷದ ಸಭೆ ಇತ್ಯಾದಿ ಚಟುವಟಿಕೆಯನ್ನು ಕಾವೇರಿ ನಿವಾಸದಲ್ಲಿ ಮಾಡುತ್ತಿದ್ದಷ್ಟು ಅಚ್ಚುಕಟ್ಟಾಗಿ ನಿರ್ವಹಿಸಲು ಕಷ್ಟ ಎನ್ನುವ ಕಾರಣಕ್ಕೆ ಕಾವೇರಿ ನಿವಾಸ ಖಾಲಿ ಮಾಡಲು ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೆ, ಯಾವುದೇ ಕಾರಣಕ್ಕೂ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಮುಂದುವರಿಕೆಗೆ ಅವಕಾಶ ನೀಡದಿರಲು ನಿವಾಸದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಲೋಕೋಪಯೋಗಿ ಇಲಾಖೆ ನಿರ್ಧರಿಸಿದ್ದು ಸಿಎಂ ಸೂಚನೆಯಂತೆ ನಿವಾಸದ ನವೀಕರಣ ಸಿದ್ಧತಾ ಕಾರ್ಯ ಆರಂಭಿಸಿದೆ.