ಬೆಂಗಳೂರು: ಕಾವೇರಿ ನೀರಿಗಾಗಿ ನಡೆಯುತ್ತಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಟೌನ್ ಹಾಲ್ ಬಳಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಾಟಾಳ್ ನಾಗರಾಜ್, ಸಾ ರಾ ಗೋವಿಂದು ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆದು ಫ್ರೀಡಂ ಪಾರ್ಕ್ಗೆ ಕರೆದೊಯ್ದಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮುಂದುವರಿಯಲಿದೆ.
ಪ್ರತಿಭಟನೆಯಲ್ಲಿ ಭಾಗಿಯಾಗುವ ಮುನ್ನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ಬುರ್ಖಾ ಧರಿಸಿ ಮಾಧ್ಯಮಗಳೊಂದಿಗೆ ಮಾತನಾಡಿರುವ ವಾಟಾಳ್ ನಾಗರಾಜ್, "ಇವತ್ತು ಎರಡು ಬಂದ್ ನಡೆಯುತ್ತಿದೆ. ಒಂದು ಕಾವೇರಿಗಾಗಿ ನಾವು ಕರೆ ಕೊಟ್ಟಿರುವ ಬಂದ್, ಮತ್ತೊಂದು ಸರ್ಕಾರ ನಮ್ಮನ್ನು ಬಂದ್ ಮಾಡುತ್ತಿರುವುದು. ನಮ್ಮ ಬಂದ್ ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಈಗಾಗಲೇ ಯಶಸ್ವಿಯಾಗಿದೆ. ನಾಡಿನ ಜನತೆಗೆ ನಾನು ಅಭಿನಂದಿಸುತ್ತೇನೆ. ರಾಜ್ಯ, ದೇಶದ ಮುಂದೆ ಇದು ಕರ್ನಾಟಕದ ಶಕ್ತಿ ಪ್ರದರ್ಶನ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳದೇ ಎಲ್ಲೆಂದರಲ್ಲಿ ಹೋರಾಟಗಾರರನ್ನು ಬಂಧಿಸುತ್ತಿದೆ. ತಮಿಳುನಾಡಿನ ಪೊಲೀಸರು ರಸ್ತೆ ತಡೆದಿದ್ದಾರೆ. ಆದರೆ ಇಲ್ಲಿ ನಮ್ಮನ್ನು ಪೊಲೀಸರು ಬಂಧಿಸುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
ಹೋರಾಟಗಾರರನ್ನು ಯಾಕೆ ಬಂಧಿಸಬೇಕು?: 144 ಸೆಕ್ಷನ್ ಜಾರಿ ಮಾಡುವ ಮೂಲಕ ಪೊಲೀಸ್ ರಾಜ್ಯ ಮಾಡಲು ಹೊರಟಿದ್ದಾರೆ. ಟೌನ್ ಹಾಲ್ನಿಂದ ಮೆರವಣಿಗೆ ಮಾಡಬಾರದು. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡಬೇಕಾ? ನಾವು ಶಾಂತಿಯುತವಾಗಿ ಮೆರವಣಿಗೆ ಮಾಡಿ ಮನವಿ ಸಲ್ಲಿಸಬೇಕೆಂದುಕೊಂಡಿದ್ದೆವು. ಆದರೆ ನೀವು ನಮ್ಮನ್ನು ಕರೆಯುವುದಿಲ್ಲ. ಸಚಿವರುಗಳೇನು ಪಾಳೇಗಾರರಾ? ಬಂದ್ಗೆ ಅವಕಾಶವಿಲ್ಲ ಎನ್ನುವ ಗೃಹಮಂತ್ರಿಗಳೇ ನೀವು ಯಾವತ್ತು ಹೋರಾಟ ಮಾಡಿದ್ದೀರಿ? ಪರಮೇಶ್ವರನೇ ಹೀಗಾದರೆ ಸಾಮಾನ್ಯರ ಗತಿಯೇನು? ಮತ್ತೊಬ್ಬರು ದೇವರ ಮಗ ಶಿವಕುಮಾರ, ನೀವು ಕರುಣೆ ತೋರದಿದ್ದರೆ ಸಾಮಾನ್ಯರ ಗತಿಯೇನು? ಒಂದು ಕಡೆ ಪರಮೇಶ ಮತ್ತೊಂದು ಕಡೆ ಅವನ ಮಗ ಶಿವಕುಮಾರ ನಮಗೆ ಕರುಣೆ ತೋರಲಿಲ್ಲ. ಇತ್ತ ಸಿದ್ದರಾಮೇಶ್ವರನೂ ಕರುಣೆ ತೋರುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ನಾನು ಧರಿಸಿರುವುದನ್ನು ಬುರ್ಖಾ ಅಂತಲೂ ಕರೆಯಬಹುದು, ನ್ಯಾಯದೇವತೆಯ ಕಣ್ಣಿಗೆ ಕಟ್ಟಿರುವ ಕಪ್ಪು ಪಟ್ಟಿ ಅಂತಲೂ ಕರೆಯಬಹುದು. ಇದು ನ್ಯಾಯದ ಸಂದೇಶ ಎಂದು ವಾಟಾಳ್ ನಾಗರಾಜ್ ತಿಳಿಸಿದರು.
ಸರ್ಕಾರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್: ಪ್ರತಿಭಟನೆ ಮುಕ್ತಾಯ ಬಳಿಕ ಫ್ರೀಡಂ ಪಾರ್ಕ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಂದ್ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಪ್ರಯತ್ನ ನಡೆಸಿದೆ. ಪ್ರತಿಭಟನೆಗೆ ಅವಕಾಶ ಕೊಟ್ಟು ನಗರದಲ್ಲಿ ನಿಷೇದಾಜ್ಞೆ ವಿಧಿಸಿದ್ದು ಸರಿಯಲ್ಲ. ಪ್ರತಿಭಟನಾ ಮೆರವಣಿಗೆ ನಡೆಸಂತೆ ಪೊಲೀಸ್ ಇಲಾಖೆ ನೀಡಿರುವ ನೋಟಿಸ್ ನಾನು ಪಡೆದುಕೊಂಡಿಲ್ಲ. ಇದುವರೆಗೂ ಸುಮಾರು 15 ಸಾವಿರ ಚಳವಳಿ ನಡೆಸಿದ್ದೇನೆ. ನಾಡು-ನುಡಿ ಪರವಾಗಿ ಹೋರಾಟ ಮಾಡಿದ ಕನ್ನಡ ಮುಖಂಡರಿಗೆ ನೋಟಿಸ್ ನೀಡಿದ್ದು ಸರಿಯಲ್ಲ. ಬಂದ್ ಯಶಸ್ವಿ ಬಳಿಕ ಅ. 5ರಂದು ಬೆಂಗಳೂರಿನಿಂದ ಕೆಆರ್ಎಸ್ ವರೆಗೂ ಜಾಥಾ ನಡೆಸ್ತೇವೆ. ಬೈಕ್ ಹಾಗೂ ಕಾರುಗಳ ಮುಖಾಂತರ ಪ್ರತಿಭಟನಾ ಮರೆವಣಿಗೆ ನಡೆಸುತ್ತೇವೆ. ಪ್ರತಿಭಟನಾ ಮೆರವಣಿಗೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ವಾಹನಗಳಿಂದ ಜನರು ಬರುವ ವಿಶ್ವಾಸವಿದೆ. ಬಂದ್ ವಿಚಾರವಾಗಿ ಇದುವರೆಗೂ ನಮ್ಮನ್ನು ಯಾರು ಸಂಪರ್ಕಿಸಿಲ್ಲ. ಸರ್ಕಾರದಿಂದ ಯಾರು ಸಹ ತನನ್ನ ಕರೆದಿಲ್ಲ ಎಂದು ಹೇಳಿದರು.
ಸಿಎಂ ನಿವಾಸಕ್ಕೆ ಹೆಚ್ಚಿನ ಭದ್ರತೆ, ಗೃಹ ಸಚಿವ, ಡಿಜಿಐಜಿಪಿ, ಬೆಂಗಳೂರು ನಗರ ಆಯುಕ್ತ ಸಿಎಂ ಭೇಟಿ: ಕರ್ನಾಟಕ ಬಂದ್ ಹಿನ್ನೆಲೆ ಸಿಎಂ ನಿವಾಸದ ಬಳಿ ಹೆಚ್ಚಿನ ಭದ್ರತೆ ಏರ್ಪಡಿಸಲಾಗಿದೆ. ಸಿಎಂ ನಿವಾಸ ಕಾವೇರಿ ಹಾಗೂ ಕಚೇರಿ ಕೃಷ್ಣಾ ಬಳಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕನ್ನಡ ಪರ ಸಂಘಟನೆಗಳು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದೆ. ಸಿಎಂ ನಿವಾಸದ ಬಳಿ 3 ಕೆಎಸ್ಆರ್ಪಿ ತುಕಡಿಗಳು ಮತ್ತು ವಾಟರ್ ಜೆಟ್ ವಾಹನ ನಿಯೋಜಿಸಲಾಗಿದೆ.
ಇತ್ತ ರಾಜ್ಯ ಸರ್ಕಾರ ಸಹ ಕಾವೇರಿ ವಿಚಾರದಲ್ಲಿ ಕಾನೂನು ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ. ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಿವೃತ್ತ ನ್ಯಾಯಮೂರ್ತಿಗಳ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಏನೆಲ್ಲ ಕ್ರಮಗಳನ್ನ ಅನುಸರಿಸಬೇಕು ಎಂಬ ಸಲಹೆ ಪಡೆಯಲಿದ್ದಾರೆ. ಮುಂದಿನ ಕಾನೂನು ಹೋರಾಟ, ಸುಪ್ರೀಂ ಕೋರ್ಟ್ನಲ್ಲಿ ಯಾವ ಅಂಶವನ್ನು ಮುಂದಿಡಬೇಕು ಎಂಬ ಬಗ್ಗೆ ಸಲಹೆಗಳನ್ನು ಸಂಗ್ರಹಿಸಲಿದ್ದಾರೆ.
ಕರ್ನಾಟಕ ಬಂದ್ ಹಿನ್ನೆಲೆ ಡಿಜಿಐಜಿಪಿ ಅಲೋಕ್ ಮೋಹನ್, ಬೆಂಗಳೂರು ಕಮಿಷನರ್ ದಯಾನಂದ್ ಸಿಎಂ ನಿವಾಸ ಕಾವೇರಿಗೆ ಆಗಮಿಸಿ ಕರ್ನಾಟಕ ಬಂದ್ ಪರಿಸ್ಥಿತಿ ಬಗ್ಗೆ ಸಿಎಂಗೆ ಮಾಹಿತಿ ನೀಡಿದರು. ಕರ್ನಾಟಕ ಬಂದ್ ಹಿನ್ನೆಲೆ ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್ ಭದ್ರತೆ ಬಗ್ಗೆ ಸಿಎಂಗೆ ಮಾಹಿತಿ ನೀಡಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮಿಸಿ ಸಿಎಂ ಜೊತೆ ಸಭೆ ನಡೆಸಿದರು.
ಬಹಿರಂಗವಾಗಿ ಕನ್ನಡಪರ ಸಂಘಟನೆ ವಿರುದ್ಧ ಕರವೇ ಅಧ್ಯಕ್ಷ ನಾರಾಯಣಗೌಡ ವಾಗ್ದಾಳಿ: ಬಹಿರಂಗವಾಗಿ ಕನ್ನಡಪರ ಸಂಘಟನೆಗಳ ವಿರುದ್ಧ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಆಕ್ರೋಶ ಹೊರಹಾಕಿದ್ದಾರೆ. ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಕಾವೇರಿ ಹೋರಾಟ ಮಾಡುತ್ತಿರುವವರ ಬಗ್ಗೆ ವಾಗ್ದಾಳಿ ನಡೆಸಿದರು. ನನ್ನ ನೇತೃತ್ವದಲ್ಲಿ ಹೋರಾಟ ಕರೆಯಬೇಕಿತ್ತು. ಯಾರೋ ನಿನ್ನೆ ಮೊನ್ನೆ ಬಂದವರ ಹಿಂದೆ ನಾನು ಹೋಗ್ಲಾ? ಎಂದು ಪ್ರಶ್ನಿಸಿದರು.
ಯಾರೋ ಎರಡು ಸಾವಿರ ಮೂರು ಸಾವಿರ ಖರ್ಚು ಮಾಡುವವನ ಹಿಂದೆ ನಾನು ಹೋಗ್ಲಾ? ವಾಟಾಳ್ ಹೋರಾಟ ಬಗ್ಗೆ ಆಕ್ಷೇಪ ಇಲ್ಲ. ಆದರೆ ಅವರ ಸುತ್ತಮುತ್ತ ಇರುವವರ ಬಗ್ಗೆ ಆಕ್ಷೇಪ ಇದೆ. ಬಂದ್ ಬಿಟ್ಟರೆ ನಾನು ಎಲ್ಲರ ಜೊತೆಗೆ ಹೋರಾಡ್ತೇನೆ ಎಂದು ಕಿಡಿ ಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಜಮೀರ್ ಭೇಟಿ: ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಕೆಪಿಸಿಸಿ ಕಚೇರಿಗೆ ತೆರಳಿ ಸಚಿವ ಜಮೀರ್ ಅಹಮದ್ ಅವರನ್ನು ಭೇಟಿ ಮಾಡಿದರು. ನಾರಾಯಣ ಗೌಡ ಕೆಪಿಸಿಸಿ ಭೇಟಿ ಅಚ್ಚರಿ ಮೂಡಿಸಿತು. ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳದ ನಾರಾಯಣ ಗೌಡ ಕೆಪಿಸಿಸಿ ಕಚೇರಿಯಲ್ಲಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಜಮೀರ್ ಅವರಿಗೆ ಹಬ್ಬದ ಶುಭಾಷಯ ಕೋರಲು ಬಂದಿದ್ದೆ. ಜಮೀರ್ ಇಲ್ಲೇ ಇದೇನೆ ಬನ್ನಿ ಅಂದ್ರು ಬಂದೆ. ನಿಂಬೆ ಹಣ್ಣು ಕೊಟ್ಟರು ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಕರ್ನಾಟಕ ಬಂದ್: ಬೆಳಗಾವಿಯಲ್ಲಿ ತಟ್ಟದ ಬಂದ್ ಬಿಸಿ, ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ