ಬೆಂಗಳೂರು: ಸೋಮವಾರ ರಾತ್ರಿಯಿಡೀ ನಗರದಲ್ಲಿ ಸುರಿದ ಭಾರಿ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿತ್ತು. ಇತ್ತೀಚೆಗೆ ನಿರ್ಮಾಣವಾಗಿದ್ದ ಉಲ್ಲಾಳದ ಪೊಲೀಸ್ ಸಶಸ್ತ್ರ ಮೀಸಲು ಪಡೆ ಕಚೇರಿಯ ಗೋಡೆ ಕುಸಿಯಿತು. ಮಳೆ ನೀರು ಕಚೇರಿಯೊಳಗೆ ನುಗ್ಗಿ ಶಸ್ತಾಸ್ತ್ರಗಳು ಒದ್ದೆಯಾಗಿವೆ.
ಬೆಂಗಳೂರು ಪಶ್ಚಿಮ ವಿಭಾಗದ ನಗರ ಸಶಸ್ತ್ರ ಮೀಸಲು ಪಡೆಯ ಶಸ್ತ್ರಾಸ್ತ್ರ ಸಂಗ್ರಹ ಕೋಣೆಗೆ ಮಳೆ ನೀರು ನುಗ್ಗಿದೆ. ಕೊಠಡಿಯಲ್ಲಿದ್ದ ಎಸ್ಎಲ್ಆರ್ ರೈಫಲ್, ಎಕೆ47, 9 ಎಂಎಂ ಪಿಸ್ತೂಲ್ ಹಾಗು ಪಂಪ್ ಆ್ಯಕ್ಷನ್ ಗನ್ ಸೇರಿದಂತೆ 500ಕ್ಕಿಂತ ಹೆಚ್ಚು ಶಸ್ತ್ರಾಸ್ತ್ರಗಳಿಗೆ ಹಾನಿಯಾಗಿದೆ.
ನೀರಿನಲ್ಲಿ ತೇಲುತ್ತಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ. ಬಂದೂಕಿನೊಳಗೆ ನೀರು, ಮಣ್ಣು ನುಗ್ಗಿದೆ. ಬಂದೂಕುಗಳನ್ನು ಶುಚಿಗೊಳಿಸಿದ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಅವುಗಳನ್ನು ಒಣಗಿಸಿಟ್ಟಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದ ಶಸ್ತ್ರಾಸ್ರಗಳು ಹಾನಿಯಾಗಿದೆ. ಕಳಪೆ ಕಾಮಗಾರಿಯಿಂದ ಗೋಡೆ ಕುಸಿದಿದೆ ಎಂದು ಪೊಲೀಸ್ ಸಿಬ್ಬಂದಿ ಹೇಳಿದರು. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಡಿಸಿಪಿ ವೈದೇಶ್ ಕುಮಾರ್ ಮಾಹಿತಿ: ''ಮಳೆಗೆ ತಡೆಗೋಡೆ ಕುಸಿದು ತರಹೇವಾರಿ ಬಂದೂಕುಗಳು ಒದ್ದೆಯಾದ ಸಂಬಂಧ ಪಕ್ಕದಲ್ಲೇ ಕಾಮಗಾರಿ ನಡೆಸುತ್ತಿರುವ ಕರ್ನಾಟಕ ರಾಜ್ಯ ಚರ್ಮ ಉದ್ಯಮ ತರಬೇತಿ ಕೇಂದ್ರದ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು'' ಎಂದು ಡಿಸಿಪಿ ಕೆ ವೈದೇಶ್ ಕುಮಾರ್ ತಿಳಿಸಿದ್ದಾರೆ.
''ಪೊಲೀಸ್ ಶಸ್ತ್ರಾಸ್ತ್ರದ ಕೊಠಡಿಗೆ ಅಂಟಿಕೊಂಡಂತೆ ಕರ್ನಾಟಕ ರಾಜ್ಯ ಚರ್ಮ ಉದ್ಯಮ ತರಬೇತಿ ಕೇಂದ್ರವಿದೆ. ಸುಮಾರು 10 ಎಕರೆಯಲ್ಲಿ ತರಬೇತಿ ಕೇಂದ್ರ ಹರಡಿಕೊಂಡಿದೆ. ಕಳಪೆ ಕಟ್ಟಡ ಕಾಮಗಾರಿ ಹಿನ್ನೆಲೆಯಲ್ಲಿ ಅದನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ. ಮಳೆ ನೀರು ಹರಿಯಲು ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಕೊಠಡಿಯ ತಡೆಗೋಡೆ ಕುಸಿದಿದೆ. ಕೊಠಡಿಯಲ್ಲಿ ಇಟ್ಟಿದ್ದ ಬಂದೂಕು, ಪಿಸ್ತೂಲ್ ಸೇರಿದಂತೆ 500ಕ್ಕಿಂತ ಹೆಚ್ಚು ಶಸ್ತ್ರಾಸ್ತ್ರಗಳು ಮಳೆಗೆ ಒದ್ದೆಯಾಗಿವೆ. ಕಳಪೆ ಕಾಮಗಾರಿಯಿಂದಲೇ ಶಸ್ತ್ರಾಸ್ತ್ರ ಕೊಠಡಿಗೆ ನೀರು ನುಗ್ಗಿದೆ. ಈ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು'' ಎಂದು ಡಿಸಿಪಿ ವೈದೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಮೌಖಿಕವಾಗಿದ ದೂರು ನೀಡಲಾಗಿದೆ, ಇನ್ನೂ ಲಿಖಿತವಾಗಿ ನೀಡಿಲ್ಲ. ದೂರು ಬಂದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅಧಿದೇವತೆ ಚಾಮುಂಡೇಶ್ವರಿಗೆ ಮಹಾಮಂಗಳಾರತಿ ವೇಳೆ ಗನ್ ಸೆಲ್ಯೂಟ್- ವಿಡಿಯೋ ನೋಡಿ