ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟದ್ದಾಗಿದ್ದು ಸಂಪುಟ ವಿಸ್ತರಣೆ ಯಾವಾಗ ಆಗಲಿದೆ ಎನ್ನುವುದನ್ನು ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಬಿ ಫಾರಂ ಪಡೆದು ಗೆದ್ದ ನಂತರ ಮೂಲ ವಲಸಿಗ ಎನ್ನುವ ಮಾತು ಬಿಜೆಪಿಯಲ್ಲಿ ಇಲ್ಲ. ಎಲ್ಲರೂ ಬಿಜೆಪಿಯ ನಾಯಕರು. ಆದರೆ, ಕೆಲ ಸಚಿವರನ್ನು ಸಂಪುಟದಿಂದ ಕೈ ಬಿಡುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಆದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದರು.
ರಾಷ್ಟ್ರೀಯ ಅಧ್ಯಕ್ಷರು ಮಾತುಕತೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮಯಾವಕಾಶ ಕೊಟ್ಟಿದ್ದರು. ಅದರಂತೆ ಸಿಎಂ ದೆಹಲಿಗೆ ತೆರಳಿ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಡ್ಡಾ ಅವರು ಮುಖ್ಯಮಂತ್ರಿಗಳ ಜೊತೆ ಏನು ಮಾತನಾಡಬೇಕಿತ್ತೋ ಅದನ್ನು ಮಾತನಾಡಿದ್ದಾರೆ. ಅದೇ ರೀತಿ ಮುಖ್ಯಮಂತ್ರಿಗಳು ಕೂಡ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ಏನೆಲ್ಲಾ ವಿಷಯ ತರಬೇಕು ಅವುಗಳನ್ನು ತಂದಿದ್ದಾರೆ. ಇಲ್ಲಿ ಕಡಿಮೆ ಸಮಯ ನೀಡಿದ್ದರೂ ಕೂಡ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ಪ್ರಶ್ನೆ ಉದ್ಭವಿಸಲ್ಲ ಎಂದರು.
ಶಾಸಕರ ಭೇಟಿ:
ಶಾಸಕರು ಅವರವರ ಕ್ಷೇತ್ರದ ಪಕ್ಷ ಸಂಘಟನೆ, ಪಂಚಾಯತ್ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ದೃಷ್ಟಿಯಿಂದ ನನ್ನ ಬಳಿ ಮಾತನಾಡಲು ಬಂದಿದ್ದರು. ಕ್ಷೇತ್ರಗಳ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎನ್ನುವ ಕುರಿತು ಪ್ರಸ್ತಾಪ ಮಾಡಿ ಸಮಾಲೋಚನೆ ನಡೆಸಿದರು ಎಂದು ಕಟೀಲ್ ಇಂದಿನ ಶಾಸಕ ನಿಯೋಗದ ಭೇಟಿಗೆ ಸ್ಪಷ್ಟೀಕರಣ ನೀಡಿದರು.