ಬೆಂಗಳೂರು: ಐರನ್ ಲೆಗ್ ಅಂದ್ರೆ ಅದು ಪ್ರಧಾನಿ ಮೋದಿ. ಅವರು ಹೋದ ಕಡೆಯಲ್ಲೆಲ್ಲಾ ಬಿಜೆಪಿಗೆ ಸೋಲಾಗಿದೆ ಎಂದು ಮಾಜಿ ಸಂಸದ ವಿ. ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಹೆಚ್. ಎಂ. ರೇವಣ್ಣ ಜೊತೆ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಪಶ್ಚಿಮ ಬಂಗಾಳಕ್ಕೆ ಹೋದರು, ಸೋತರು. ತಮಿಳುನಾಡಿಗೆ ಹೋದರು, ಅಲ್ಲಿ ಸೋತರು. ಹಿಮಾಚಲ ಪ್ರದೇಶಕ್ಕೆ ಹೋದರು, ಅಲ್ಲಿಯೂ ಸೋತರು. ಐರನ್ ಲೆಗ್ ಏನಾದರೂ ಇದ್ದರೆ ಅದು ಮೋದಿ ಎಂದು ಲೇವಡಿ ಮಾಡಿದರು.
ನಾವು ಐದು ಗ್ಯಾರಂಟಿಗಳನ್ನ ಕೊಟ್ಟಿದ್ದೆವು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆ ದೊರೆಕಿದೆ. 5.71 ಲಕ್ಷ ಮಹಿಳಾ ಪ್ರಯಾಣಿಕರು ಇದರ ಸೌಲಭ್ಯ ಪಡೆದಿದ್ದಾರೆ. ಐದೂ ಕಾರ್ಯಕ್ರಮಗಳನ್ನು ಟೈಂ ಬಾಂಡ್ನಲ್ಲಿ ತಂದಿದ್ದೇವೆ. ಕೊಟ್ಟ ವಚನವನ್ನ ಕಾಂಗ್ರೆಸ್ ಪಾಲಿಸಿದೆ. ಬಿಜೆಪಿ ಪದೇ ಪದೆ ಡಬಲ್ ಎಂಜಿನ್ ಅಂತಿದ್ರು. ಈಗ ಜನ ಒಂದು ಎಂಜಿನ್ ಶೆಡ್ಡಿಗೆ ಕಳಿಸಿದ್ದಾರೆ. 2024 ರಲ್ಲಿ ದೆಹಲಿ ಎಂಜಿನ್ ಕೂಡ ಶೆಡ್ ಸೇರಲಿದೆ ಎಂದು ತಿಳಿಸಿದರು.
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಅಂದ್ರು. ಕಪ್ಪು ಹಣ ಬ್ಯಾಂಕಿಗೆ ಹಾಕ್ತೇವೆ ಅಂದ್ರು. 15 ಲಕ್ಷ ಹಣ ಅಕೌಂಟಿಗೆ ಹಾಕ್ತೇವೆ ಅಂದ್ರು. ಇದ್ಯಾವುದೂ ಅವರಿಂದ ಆಗಲಿಲ್ಲ. ತಮಿಳುನಾಡಿನಲ್ಲಿ ಅಮಿತ್ ಶಾ, ತಮಿಳುನಾಡಿನವರು ಎರಡು ಬಾರಿ ಪ್ರಧಾನಿ ಆಗಬೇಕಿತ್ತು ಎಂದು ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಹೇಳಿದ್ದಾರೆ. ನೀವು ಅಡ್ವಾಣಿಯವರನ್ನೇ ಪ್ರಧಾನಿ ಮಾಡಲಿಲ್ಲ. ಬಂಗಾರು ಲಕ್ಷ್ಮಣ್ ಅವರನ್ನ ಪ್ರಧಾನಿ ಮಾಡಲಿಲ್ಲ. ನೀವು ದಕ್ಷಿಣ ಭಾರತದವರನ್ನ ಪ್ರಧಾನಿ ಮಾಡ್ತೀರ? ಖಂಡಿತವಾಗಿ ನೀವು ಮಾಡುವುದಿಲ್ಲ ಎಂದು ಟೀಕಿಸಿದರು.
40% ಕಮೀಷನ್ ತನಿಖೆಗೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರವನ್ನ ಸಹಿಸಲ್ಲ. ನಮ್ಮ ಸರ್ಕಾರ ಬದ್ಧವಾಗಿದೆ. ವ್ಯವಸ್ಥೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸ್ತೇವೆ. ಈಗಾಗಲೇ ಸರ್ಕಾರ ಕೆಲಸ ಪ್ರಾರಂಭ ಮಾಡಿದೆ. ತನಿಖೆಯನ್ನು ಪ್ರಾರಂಭ ಮಾಡಿದೆ ಎಂದರು.
ಗ್ಯಾರಂಟಿಗಳಿಗೆ ಬಿಜೆಪಿ ಸೊರಗಿದೆ: ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಮೋದಿ ವರ್ಚಸ್ಸು ಇವತ್ತು ಕೆಳಗಿಳಿದಿದೆ. ರೋಡ್ ಶೋ ಮಾಡಿದ್ರೂ ಜನ ಸೇರುತ್ತಿಲ್ಲ. ಅಮಿತ್ ಶಾ ಅವರನ್ನ ಚುನಾವಣಾ ಚಾಣಕ್ಯ ಅಂತಾರೆ. ತಮಿಳು ಜನರನ್ನು ಆಕರ್ಷಿಸಲು ಶಾ ಅಂತಹ ಹೇಳಿಕೆ ನೀಡಿದ್ದಾರೆ. ಅಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದಾರೆ. ಪ್ರಧಾನಿ ಮಾಡ್ತೇವೆ ಅಂತೆಲ್ಲ ಹೇಳಿದ್ದಾರೆ. ಆದರೆ, ತಮಿಳುನಾಡು ಜನ ಬಹಳ ಬುದ್ಧಿವಂತರಿದ್ದಾರೆ. ನಮ್ಮ ಗ್ಯಾರಂಟಿಗಳಿಗೆ ಬಿಜೆಪಿ ಸೊರಗಿದೆ. ನಮ್ಮ ಶಕ್ತಿ ಕಾರ್ಯಕ್ರಮ ಬಹಳ ಯಶಸ್ವಿಯಾಗಿದೆ. ಅತ್ತೆಗೋ, ಸೊಸೆಗೋ ಎಂದು ಜಗಳ ತಂದಿಟ್ಟಿದ್ದರು. ಇವತ್ತು ಜನ ಬಿಜೆಪಿ ಮಾತಿಗೆ ಸೊಪ್ಪು ಹಾಕಿಲ್ಲ ಎಂದು ಉಗ್ರಪ್ಪ ತಿರುಗೇಟು ನೀಡಿದರು.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗೆ ಜನ ಬರಬೇಕೋ ಬೇಡ್ವೋ: ಮೂರು ತಿಂಗಳಲ್ಲಿ ವ್ಯವಸ್ಥೆ ಸರಿಪಡಿಸುವಂತೆ ಸಿಎಂ ಸೂಚನೆ