ಬೆಂಗಳೂರು: ಕೆಪಿಸಿಸಿ ಮುಖ್ಯ ವಕ್ತಾರ ಸ್ಥಾನಕ್ಕೆ ವಿ ಆರ್ ಸುದರ್ಶನ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಾಲಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರದಲ್ಲಿ ತೊಡಗಿಕೊಳ್ಳಲಿರುವ ಈ ಹಿನ್ನೆಲೆಯಲ್ಲಿ ವಿ ಆರ್ ಸುದರ್ಶನ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.
ಎಐಸಿಸಿ ಮಟ್ಟದಲ್ಲಿ ಕಾರ್ಯನಿರ್ವಹಿಸಲು ತೆರಳುತ್ತಿರುವ ಹಿನ್ನೆಲೆ ಕೆಪಿಸಿಸಿ ಮುಖ್ಯ ವಕ್ತಾರ ಸ್ಥಾನಕ್ಕೆ ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದ್ದು ಅವರೊಂದಿಗೆ ಮುಂಬರುವ ದಿನಗಳಲ್ಲಿ ನಿರಂತರವಾಗಿದ್ದು, ಕಾರ್ಯನಿರ್ವಹಿಸುವ ಸಲುವಾಗಿ ವಿ ಆರ್ ಸುದರ್ಶನ್ ನಿಯೋಜಿತರಾಗುತ್ತಿದ್ದಾರೆ. ಈ ಹಿನ್ನೆಲೆ ಬಹುತೇಕ ದಿಲ್ಲಿಯಲ್ಲೇ ಇರಬೇಕಾಗಿ ಬರುವ ಹಿನ್ನೆಲೆ ರಾಜ್ಯದ ಅಧಿಕಾರಕ್ಕೆ ಅವರು ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ಅಖಿಲ ಭಾರತ ಕಾಂಗ್ರೆಸ್ನ ಪರಂಪರೆ, ಪ್ರಯತ್ನ, ಸಾಧನೆಗಳ ಈ ಹಿನ್ನೆಲೆಯಲ್ಲಿ ಸುಮಾರು 24 ವರ್ಷಗಳ ನಂತರ ಆಂತರಿಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಸಲುವಾಗಿ ಎಐಸಿಸಿ ಅಧ್ಯಕ್ಷ ಪದವಿಗೆ ಚುನಾವಣೆ ನಡೆಸುತ್ತಿರುವುದು ಸ್ವಾಗರ್ತಾರ್ಹ.
ಈ ಸಂದರ್ಭದಲ್ಲಿ ಭವಿಷ್ಯದಲ್ಲಿ ಭರವಸೆ ಮೂಡಿಸಿರುವ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ಪಾದಯಾತ್ರೆ ಮಾಡುತ್ತಿರುವುದು ಉತ್ತಮ ಪ್ರಯತ್ನ ಹಾಗೂ ಬೆಳವಣಿಗೆ. ಎಐಸಿಸಿ ಅಧ್ಯಕ್ಷ ಪದವಿಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಹಿರಿಯ ಅನುಭವಿ ನಾಯಕ ಅವರಿಗೆ ಅಭಿನಂಧನೆಗಳು ಹಾಗೂ ಶುಭಾಶಯಗಳು ಎಂದು ಸುದರ್ಶನ್ ಹೇಳಿದ್ದಾರೆ.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ, ಕರ್ನಾಟಕ ವಿಧಾನಸಭಾ ಪ್ರತಿಪಕ್ಷದ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಎಐಸಿಸಿ ಪ್ರಧಾನಕಾರ್ಯದರ್ಶಿಯಾಗಿ, ಸಿಡಬ್ಲ್ಯುಸಿ ಸದಸ್ಯರಾಗಿ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸಚಿವರಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ, ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಪರಿಣಾಮಕಾರಿಯಾಗಿ ಮತ್ತು ಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸಿ, ಅಪಾರ ಅನುಭವ ಹೊಂದಿದ್ದಾರೆ. ಈ ಅನುಭವ ಮತ್ತು ಹಿರಿತನ ಪಕ್ಷಕ್ಕೆ ಭವಿಷ್ಯದಲ್ಲಿ ಸಂಘಟನೆಗೆ ಪ್ರಯೋಜನೆಕಾರಿಯಾಗಲಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ದೇಶದ ಎಲ್ಲಾ ಕಾಂಗ್ರೆಸ್ ಸದಸ್ಯರು ಅವರ ಅಭ್ಯರ್ಥಿ ಆಯ್ಕೆ ಬೆಂಬಲಿಸಬೇಕೆಂದು ಮನವಿ ಮಾಡುತ್ತೇನೆ. ಹಾಗೇಯೆ ಎಐಸಿಸಿ ಕೇಂದ್ರ ಚುನಾವಣಾ ಮಂಡಳಿ ಅಧ್ಯಕ್ಷರಾದ ಮಧುಸೂದನ್ ಮಿಸ್ತ್ರಿ ಅವರು ಚುನಾವಣಾ ಹಿನ್ನೆಲೆಯಲ್ಲಿ ಉತ್ತಮ ನಿಯಮಗಳನ್ನು ಪಾಲನೆ ಮಾಡಲು ತಿಳಿಸಿರುತ್ತಾರೆ.
ಅದು ಕೂಡ ಸ್ವಾಗರ್ತಾರ್ಹ ಮತ್ತು ಅವರಿಗೆ ಅಭಿನಂದನೆಗಳು. ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸುವ ಮತ್ತು ಪ್ರಚಾರ ಮಾಡುವ ಹಿನ್ನೆಲೆಯಲ್ಲಿ ನಾನು ಕೆಪಿಸಿಸಿ ಮುಖ್ಯ ವಕ್ತಾರರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ವಿ ಆರ್ ಸುದರ್ಶನ್ ತಿಳಿಸಿದ್ದಾರೆ.
ಇದನ್ನೂ ಓದಿ : ಗಾಂಧಿ ಕುಟುಂಬ ಒಲ್ಲೆ ಎಂದಿದಕ್ಕೆ ನಾನು ಸ್ಪರ್ಧೆ ಮಾಡಿದ್ದೇನೆ: ಖರ್ಗೆ