ಬೆಂಗಳೂರು: ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ಬಿಜೆಪಿಯಲ್ಲಿ ವೋಟಿಂಗ್ ವ್ಯವಸ್ಥೆಯ ಪ್ರಾಯೋಗಿಕ ಪರಿಚಯ ಮಾಡಲಾಗಿದ್ದು, ಚುನಾವಣಾ ಟಿಕೆಟ್ ಸಮಿತಿ ರಚಿಸಿ ಮತಗಳ ಆಧಾರದಲ್ಲಿ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿ ಕೊಡುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ. ನಾಳೆ ವೋಟಿಂಗ್ ನಡೆಯಲಿದ್ದು, ಅಮಿತ್ ಶಾ ಸಮ್ಮುಖದಲ್ಲಿ ಚರ್ಚೆ ನಡೆಸಿ ಹೈಕಮಾಂಡ್ಗೆ ಪಟ್ಟಿ ಕಳುಹಿಸಿಕೊಡಲಾಗುತ್ತದೆ.
ರಾಜ್ಯ ಬಿಜೆಪಿ ಚುನಾವಣಾ ಟಿಕೆಟ್ಗೆ ಸಮಿತಿ ರಚಿಸಲಾಗಿದೆ. ಟಿಕೆಟ್ ಆಯ್ಕೆ ಪ್ರಕ್ರಿಯೆಗಾಗಿ ಶುಕ್ರವಾರ ರಾಜ್ಯಾದ್ಯಂತ ಅಭಿಪ್ರಾಯ ಸಂಗ್ರಹ ಮಾಡಲಿರುವ ಸಮಿತಿ, ಮತದಾನದ ಮೂಲಕ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಸಲಿದೆ. ಯಾರು ಕ್ಷೇತ್ರದ ಅಭ್ಯರ್ಥಿ ಆಗಬೇಕು ಎನ್ನುವ ನಿರ್ಣಯವನ್ನು ಅಭಿಪ್ರಾಯ ಸಂಗ್ರಹದ ಆಧಾರದಲ್ಲಿ ಮಾಡಲಾಗುತ್ತದೆ.
ಯಾರೆಲ್ಲಾ ಮತದಾನ ಪ್ರಕ್ರಿಯೆಯಲ್ಲಿ ಭಾಗಿ ಆಗ್ತಾರೆ?: ಪಕ್ಷದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ , ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಮಾಜಿ ಸದಸ್ಯ, ಕಾರ್ಪೋರೇಟ್ ಮತ್ತು ಮಾಜಿ ಕಾರ್ಪೋರೇಟ್ಸ್, ಪಟ್ಟಣ ಪಂಚಾಯತಿ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ, ಶಾಸಕ ಮತ್ತು ಮಾಜಿ ಶಾಸಕ ಮತ್ತು ಸಂಸದ ಮತ್ತು ಮಾಜಿ ಸಂಸದ.
ಇಷ್ಟು ಮಂದಿಯ ಪಕ್ಷದ ಪ್ರಮುಖರು ತಮ್ಮ ಅಭಿಪ್ರಾಯ ತಿಳಿಸಬೇಕು. ಅಭ್ಯರ್ಥಿ ಯಾರಾಗಬೇಕು ಎಂದು ಹೆಸರು ಬರೆದು ಬಾಕ್ಸ್ಗೆ ಹಾಕಬೇಕು. ಪ್ರತಿ ಕ್ಷೇತ್ರದಲ್ಲಿ ಬಾಕ್ಸ್ ಇಡಲಾಗುತ್ತದೆ. ಆ ಬಾಕ್ಸ್ಗಳನ್ನು ನಾಳೆ ಸಂಜೆಯೇ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನಕ್ಕೆ ತರಲಾಗುತ್ತದೆ. ಸಮಿತಿ ಸದಸ್ಯರು ಆ ಬಾಕ್ಸ್ ಓಪನ್ ಮಾಡಬೇಕು. ಯಾರ ಹೆಸರಿಗೆ ಹೆಚ್ಚು ಮಾನ್ಯತೆ ಇದೆ, ಯಾರು ಅಭ್ಯರ್ಥಿ ಆಗಬೇಕು ಎಂದು ಬಯಸಿದ್ದಾರೆ ಎನ್ನುವ ಕುರಿತು ಬಾಕ್ಸ್ ತೆರೆದು ಲೆಕ್ಕಹಾಕಿ ಆ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕು.
31ರ ಒಂದೇ ದಿನ ಪ್ರತಿಕ್ರಿಯೆ: ಶುಕ್ರವಾರ ಇಡೀ ದಿನ ಜಿಲ್ಲೆಗಳಲ್ಲಿ ಬಿಜೆಪಿಯಿಂದ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಯಲಿದ್ದು, ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಬಿಜೆಪಿ ವೀಕ್ಷಕರ ತಂಡದಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಎಲ್ಲ ಜಿಲ್ಲೆಗಳಿಗೂ ಸಂಭಾವ್ಯರ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ ಭೇಟಿ ಕೊಡಲಿರುವ ತಂಡಗಳು, ಏಪ್ರಿಲ್ 1 ರಂದು ಈ ವರದಿಗಳನ್ನು ಅಮಿತ್ ಶಾ ಅವರಿಗೆ ಸಲ್ಲಿಕೆ ಮಾಡಲಿದೆ.
ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಗೊಂದಲ ಬಗೆಹರಿಸಲು ಖುದ್ದು ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಟ್ಟಿದ್ದು, ಏಪ್ರಿಲ್ 1 ರಿಂದ 4 ರವರೆಗೆ ಅಮಿತ್ ಶಾ ಮೆಗಾ ಮೀಟಿಂಗ್ ಮಾಡಲಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಮೆಗಾ ಸಭೆ ನಡೆಸಲಿದ್ದಾರೆ. ನಾಲ್ಕು ದಿನಗಳಲ್ಲಿ ಎಲ್ಲ ಜಿಲ್ಲೆಗಳ ಸಂಭಾವ್ಯರ ಪಟ್ಟಿ ಪರಿಶೀಲನೆ ನಡೆಸಲಿರುವ ಅಮಿತ್ ಶಾ, ಜಿಲ್ಲಾ ಘಟಕಗಳ ಪ್ರಮುಖರ ಜತೆ ಸಭೆ ನಡೆಸಿ ಸಂಭಾವ್ಯ ಅಭ್ಯರ್ಥಿಗಳನ್ನು ಫೈನಲ್ ಮಾಡಲಿದ್ದಾರೆ.
ಮತಗಳ ಎಣಿಕೆ ಮತ್ತು ಅಭ್ಯರ್ಥಿಗಳ ಬಗೆಗಿನ ಒಲವು ಸೇರಿದಂತೆ ಸಮಿತಿ ನೀಡುವ ವರದಿಯನ್ನು ಪರಾಮರ್ಶೆ ನಡೆಸಲಿರುವ ಅಮಿತ್ ಶಾ ನಂತರ ಪಟ್ಟಿಯನ್ನು ಅಂತಿಮಗೊಳಿಸಿ ನಂತರ ಕೇಂದ್ರ ಚುನಾವಣಾ ಸಮಿತಿಗೆ ರಾಜ್ಯ ಘಟಕದಿಂದ ಸಂಭಾವ್ಯರ ಅಥವಾ ಆಕಾಂಕ್ಷಿಗಳ ಪಟ್ಟಿಯನ್ನು ರವಾನೆ ಮಾಡಲಾಗುತ್ತದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪರಾಮರ್ಶೆಗೆ ಪ್ರತ್ಯೇಕ ಸಮಿತಿ: ಅಭ್ಯರ್ಥಿ ಆಯ್ಕೆ ಅಧಿಕಾರ ಕೈಗೆತ್ತಿಕೊಂಡ ಹೈಕಮಾಂಡ್