ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ನಾಳೆಯಿಂದ ಬ್ಯಾಲೆಟ್ ಪೇಪರ್ ವೋಟಿಂಗ್ ಆರಂಭವಾಗಲಿದೆ. 80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ವಿಕಲಚೇತನರು ಮನೆಯಿಂದ, ಪೊಲೀಸರು, ಚುನಾವಣಾ ಸಿಬ್ಬಂದಿ ಹಾಗೂ ಪತ್ರಕರ್ತರು ಬ್ಯಾಲೆಟ್ ಪೇಪರ್ ಮೂಲಕ ತಮ್ಮ ಹಕ್ಕು ಚಲಾಯಿಸಲು ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ.
80 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಮನೆ ಬಳಿಯೇ ವೋಟಿಂಗ್ ವ್ಯವಸ್ಥೆ ಮಾಡಲಾಗಿದ್ದರೆ, ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಪತ್ರಕರ್ತರು ಅವರವರ ಕ್ಷೇತ್ರಗಳಲ್ಲಿ ನಾಳೆಯಿಂದ ಬ್ಯಾಲೇಟ್ ವೋಟಿಂಗ್ ಮಾಡಬಹುದಾಗಿದೆ. ಚುನಾವಣಾ ಆಯೋಗದ ಸಿಬ್ಬಂದಿಯಿಂದ 80 ವರ್ಷ ಮೇಲ್ಪಟ್ಟ ವೃದ್ಧರ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಗೌಪ್ಯವಾಗಿ ಮತ ಚಲಾವಣೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಗೌಪ್ಯ ಮತ ಚಲಾಯಿಸುವಾಗ ಚುನಾವಣೆ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸರು ಸ್ಥಳದಲ್ಲಿ ಹಾಜರಿರುತ್ತಾರೆ.
ಮನೆಯಲ್ಲೇ ಮತದಾನ ಮಾಡುವ ಸಂದರ್ಭದಲ್ಲಿ ವಿಡಿಯೋ ರೇಕಾರ್ಡಿಂಗ್ ಮಾಡಿಕೊಳ್ಳಲಾಗುತ್ತದೆ. ಮತದಾನದ ನಂತರ ಸ್ಟ್ರಾಂಗ್ ರೂಂಗೆ ಮತ ಪೆಟ್ಟಿಗೆಯನ್ನು ರವಾನಿಸಲಾಗುತ್ತದೆ. ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಹಾಗೂ ಪೊಲೀಸರಿಗೆ ಬ್ಯಾಲೆಟ್ ಮತದಾನದ ವ್ಯವಸ್ಥೆ ಮಾಡಲಾಗಿದ್ದು, ಇವರು ಕೂಡ ನಾಳೆಯಿಂದ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಬಹುದು. ಈ ಎಲ್ಲ ಮತಗಳನ್ನೂ ಮೇ 13 ರಂದು ಮತ ಎಣಿಕೆ ದಿನ ಓಪನ್ ಮಾಡಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ನೋಂದಣಿ ಮಾಡಿಕೊಂಡ ವೃದ್ಧರೆಷ್ಟು?: ಬೆಂಗಳೂರು ನಗರದಲ್ಲಿ 80 ವರ್ಷ ಮೇಲ್ಪಟ್ಟ 9,152 ಮಂದಿ ಮತದಾರರಿದ್ದಾರೆ. ನಗರ ಜಿಲ್ಲೆಯಲ್ಲಿ 2,329, ಕೇಂದ್ರ ವಲಯದಲ್ಲಿ 1,995, ಉತ್ತರದಲ್ಲಿ 2,298 ಹಾಗೂ ದಕ್ಷಿಣದಲ್ಲಿ 2,530 ಮಂದಿ ವೃದ್ಧರಿದ್ದಾರೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 2.37 ಲಕ್ಷ 80 ವರ್ಷ ದಾಟಿದ ಹಿರಿಯ ನಾಗರಿಕರು ಮತ್ತು 25,790 ವಿಕಲ ಚೇತನ ಮತದಾರರಿದ್ದಾರೆ. ಒಟ್ಟು 2.62 ಲಕ್ಷ ಮತದಾರರು ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಆದರೆ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕೇವಲ 9,152 ಮತದಾರರು ಮಾತ್ರ ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ: ಅಂಚೆ ಮತದಾನ ಮಾಡುವ ಸಿಬ್ಬಂದಿ, ಅಧಿಕಾರಿಗಳಿಗೆ ವೇತನ ಸಹಿತ ರಜೆ