ಯಲಹಂಕ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿರುವ ಶಾಸಕ ಎಸ್.ಆರ್. ವಿಶ್ವನಾಥ್ ತಮ್ಮ ಸ್ವಗ್ರಾಮ ಸಿಂಗನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದರು.
ಈ ವೇಳೆ ಮಾತನಾಡಿದ ಅವರು ಬಿಜೆಪಿ ಜೊತೆ ಜೆಡಿಎಸ್ ವಿಲೀನದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಒಂದು ಕಾಲದಲ್ಲಿ ಜೆಡಿಎಸ್ ಸಹ ರಾಷ್ಟ್ರೀಯ ಪಕ್ಷ ಆಗಿತ್ತು. ಬಿಜೆಪಿ ಜೊತೆ ಜೆಡಿಎಸ್ ವಿಲೀನ ಇಲ್ಲ, ಎಲ್ಲವೂ ಊಹಾಪೋಹ. ರಾಜ್ಯದಲ್ಲಿ ಜೆಡಿಎಸ್ ಸಹ ಪ್ರಮುಖ ಪಕ್ಷ. ಮುಂದೆ ಬೆಂಬಲ ಕೊಡಬಹುದು ಅಥವಾ ಸಮ್ಮಿಶ್ರ ಸರ್ಕಾರ ಮಾಡಬಹುದು. ಆದರೆ ವಿಲೀನ ಯಾವುದೇ ಕಾರಣಕ್ಕೂ ಇಲ್ಲ. ಸೋಮವಾರ ಸಿ.ಎಂ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಸಹ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದರು.
ಓದಿ: ಮತದಾನ ಚಿಹ್ನೆ ಬದಲಾವಣೆ : ಕೆ. ತುಪ್ಪದೂರಲ್ಲಿ ಕೆಲಕಾಲ ಮತದಾನ ಸ್ಥಗಿತ
ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಯಾರನ್ನು ಸಚಿವರನ್ನಾಗಿ ಮಾಡಬೇಕೆಂಬುದರ ಬಗ್ಗೆ ಸಿಎಂ ಹಾಗೂ ನಮ್ಮ ಪಕ್ಷದ ವರಿಷ್ಟರು ನಿರ್ಧಾರ ಮಾಡಲಿದ್ದಾರೆ. ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ, ನನಗೆ ಕೊಟ್ಟಿರುವ ಬಿಡಿಎ ನಿಗಮದಲ್ಲೇ ಉತ್ತಮ ಕೆಲಸ ಮಾಡುವೆ ಎಂದು ತಿಳಿಸಿದರು.