ಬೆಂಗಳೂರು: ಕಾಂಗ್ರೆಸ್ ಮುಗಿದೇ ಹೋಯಿತು ಎಂದವರಿಗೆ ಹಾನಗಲ್ ಕ್ಷೇತ್ರದ ಮತದಾರರು ಸರಿಯಾದ ಪ್ರತ್ಯುತ್ತರ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗಿ ಹೋಯಿತು, ಮುಳುಗುವ ಹಡಗು, ಇಬ್ಭಾಗ ಆಗೋಗಿದೆ ಎಂದು ಸ್ನೇಹಿತರು ವ್ಯಾಖ್ಯಾನ ಮಾಡಿದ್ದರು ಎಂದರು.
ಇಡೀ ದೇಶದ ಉದ್ದಗಲಕ್ಕೂ ತೀರ್ಪು ಸಿಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೆ ಸಮನಾಂತರವಾದ ಫಲಿತಾಂಶವನ್ನು ದೇಶದ ಜನತೆ ನೀಡಿದ್ದಾರೆ. ಬಿಜೆಪಿ ಸಹ ಕೆಲ ಸ್ಥಾನ ಉಳಿಸಿಕೊಂಡು ಇನ್ನೂ ಹಲವೆಡೆ ಮುಖಭಂಗವಾಗಿದೆ ಎಂದಿದ್ದಾರೆ.
ನಮ್ಮ ರಾಜ್ಯದಲ್ಲಿಯೂ ಕೂಡ ಸಿಂದಗಿಯಲ್ಲಿ ನಾವು 3ನೇ ಸ್ಥಾನದಲ್ಲಿದ್ದೆವು, ಈಗ ನಾವು ಎರಡನೇ ಸ್ಥಾನಕ್ಕೆ ಬಂದಿದ್ದೇವೆ. ಹಾನಗಲ್ ಕ್ಷೇತ್ರದಲ್ಲಿ ಇಡೀ ಸರ್ಕಾರ ಕೂತಿತ್ತು. ಬಿಜೆಪಿಯ ಹಿರಿಯ ನಾಯಕರು, ಸಿಎಂ ಪಕ್ಕದ ಕ್ಷೇತ್ರ ಇದೆಲ್ಲದರ ನಡುವೆ ಆ ಕ್ಷೇತ್ರದ ಜನತೆ ದಿಟ್ಟ ನಿರ್ಧಾರ ತೆಗೆದುಕೊಂಡರು. ಎಷ್ಟೇ ಆಮಿಷ, ಒತ್ತಡ ಮಾಡಿದರೂ ಕೂಡ ಮತದಾರರು ಕಾಂಗ್ರೆಸ್ ಪಕ್ಷವನ್ನ ಕೈಹಿಡಿದು ದೇಶಕ್ಕೆ ಒಂದು ಸಂದೇಶ ನೀಡಿದ್ದಾರೆ.
ಹಾನಗಲ್ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ನಾನು ಅಲ್ಲಿನ ದೇವಿಯಲ್ಲಿ ಹರಕೆ ಮಾಡಿಕೊಂಡಿದ್ದೆ. ಚುನಾವಣೆ ಗೆಲ್ಲಿಸಿಕೊಡುವಂತೆ ಕೋರಿದ್ದೆ. ಗೆಲುವು ಲಭಿಸಿರುವ ಹಿನ್ನೆಲೆಯಲ್ಲಿ ನವೆಂಬರ್ 5 ರಂದು ಹಬ್ಬ ಇದ್ರೂ ಅಲ್ಲಿಗೆ ಭೇಟಿ ನೀಡುವೆ. ವಿಶೇಷ ಪೂಜೆ ಸಲ್ಲಿಸಿ ಬರುತ್ತೇನೆ ಎಂದರು.
ಇದನ್ನೂ ಓದಿ: ಬಿಜೆಪಿ ಸರ್ಕಾರ ಜನರ ಜೇಬು ಖಾಲಿ ಮಾಡುತ್ತಿದೆ: ಮಲ್ಲಿಕಾರ್ಜುನ ಖರ್ಗೆ