ಬೆಂಗಳೂರು: 'ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ' ಹಗರಣವನ್ನು ಚೀಫ್ ಜಸ್ಟಿಸ್ ಅವರಿಂದ ತನಿಖೆ ಮಾಡಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಮೈಸೂರು ಪ್ರವಾಸಕ್ಕೆ ಹೊರಡುವ ಮುನ್ನ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಗಂಭೀರ ಅಪರಾಧ ಪ್ರಕರಣ. ಈ ಬಗ್ಗೆ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಚಿಲುಮೆ ಸಂಸ್ಥೆಗೆ ಮೈತ್ರಿ ಸರ್ಕಾರ ಇದ್ದಾಗಲೇ ಅನುಮತಿ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇವರ ಕಾಲದಲ್ಲಿ ಇತ್ತು ಎಂದು ಕೇಳುತ್ತೀರಲ್ಲ. ಒಂದು ಸಂಸ್ಥೆ ದುಡ್ಡು ಇಲ್ಲದೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಅದಕ್ಕೆ ಜಾಹೀರಾತು ಕೊಡದೆ ಅವರಿಗೆ ಕೊಟ್ಟಿದ್ದಾರೆ. ಅವರು ಬಿಎಲ್ಓಗಳನ್ನು ಇಂಪರ್ಸನೇಶನ್ ಮಾಡಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿ ಕಮಿಷನರ್ ಅನುಮತಿ ಇಲ್ಲದೆ ಮಾಡಲು ಆಗುತ್ತಾ? ಎಂದು ಪ್ರಶ್ನಿಸಿದರು.
ವ್ಯವಹಾರ ಎಷ್ಟು ನಡೆದಿರಬಹುದು. ಹಣ ಇಲ್ಲದೆ ಮಾಡುತ್ತಿದ್ದಾರೆ. 8 ಸಾವಿರ ರೂ., 10 ಸಾವಿರ ರೂ. ಜನರನ್ನು ನೇಮಕ ಮಾಡಬೇಕಾದರೆ ಎಷ್ಟು ಹಣ ಬೇಕು. ದಿನಕ್ಕೆ 1500 ಕೊಡಬೇಕಾದರೇ ಎಷ್ಟು ಹಣ ಬೇಕು. ಅದಕ್ಕೆ ಹಿಂದಿನ ಕಾಲದಲ್ಲಿ ಆಗಿತ್ತು. ಅಂದರೆ ಮೊದಲು ತನಿಖೆ ಮಾಡಲಿ, ನಾವು ಕೇಸ್ ದಾಖಲು ಮಾಡಿದ್ದೇವೆ ಎಂದರು.
ಚುನಾವಣಾ ಆಯೋಗ ಭಾಗಿ?: ಈ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಸಿದರೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಮಾತ್ರವಲ್ಲ ಚುನಾವಣಾ ಆಯೋಗ ಕೂಡಾ ಈ ಹೀನ ಕೃತ್ಯದಲ್ಲಿ ಭಾಗಿಯಾಗಿರುವ ಗುಮಾನಿಗಳಿವೆ. ಕೇಂದ್ರ ಚುನಾವಣಾ ಆಯೋಗ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬಾಂಬೆ ಫ್ರೆಂಡ್ಸ್ಗೆ ನಡುಕ?: ಕೋಲಾರದಿಂದ ಸ್ಪರ್ಧೆ ಮಾಡಿದರೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪಾರುಪತ್ಯ ಸಾಧಿಸಲು ಅನುಕೂಲವಾಗುತ್ತದೆ. ಜತೆಗೆ ಭರ್ಜರಿ ಪ್ರಚಾರ ನಡೆಸಲು ಕೂಡ ಸಲೀಸು. ಹಾಗಾಗಿ ಈಗಿನಿಂದಲೇ ತಾಲೀಮು ನಡೆಸುತ್ತಿರುವ ಸಿದ್ದರಾಮಯ್ಯ ಅವರಿಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರದಲ್ಲಿ ಅಹಿಂದ ಮತಗಳೇ ನಿರ್ಣಾಯಕವಾಗಲಿವೆ. ಈ ಭಾಗದಿಂದ ಸ್ಪರ್ಧೆ ಮಾಡಿದರೆ ಅಹಿಂದ ಮತಗಳನ್ನು ಸೆಳೆಯುವುದು ಸುಲಭ. ಹೀಗಾಗಿ ಬಾಂಬೆ ಫ್ರೆಂಡ್ಸ್ ಅಣಿಯಲು ಸಿದ್ದರಾಮಯ್ಯ ತಂತ್ರ ನಡೆಸಿದ್ದಾರೆಯೇ? ಎಂಬ ಮಾತುಗಳು ಕೇಳಿ ಬಂದಿವೆ.
ಮೈಸೂರು ಜಿಲ್ಲಾ ಪ್ರವಾಸಕ್ಕೆ ತೆರಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಂದು ಸ್ಥಳೀಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇಂದು ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ: ಸರ್ಕಾರದ ನಡೆ ಜನರಲ್ಲಿ ಸಂಶಯ ಮೂಡಿಸುತ್ತದೆ: ಹೆಚ್ಡಿ ಕುಮಾರಸ್ವಾಮಿ