ಬೆಂಗಳೂರು: ಸಾಮಾಜಿಕ ನ್ಯಾಯ ಹಾಗೂ ಭೌಗೋಳಿಕ ನ್ಯಾಯವನ್ನು ಪಾಲಿಸಿಕೊಂಡು ಸಂಪುಟ ಸರ್ಜರಿ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ದೆಹಲಿಗೆ ತೆರಳಿದ್ದಾರೆ. ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿವೇಚನೆಗೆ ಬಿಟ್ಟ ವಿಷಯವಾಗಿದ್ದು, ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಿ ಸಂಪುಟ ವಿಸ್ತರಣೆ ದಿನಾಂಕ ನಿಗದಿಪಡಿಸಲಿದ್ದಾರೆ ಎಂದರು.
ಸಂಪುಟದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು, ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಎಲ್ಲಾ ವಿಚಾರಗಳನ್ನು ಕೇಂದ್ರದ ಹಿರಿಯ ನಾಯಕರ ಜೊತೆ ಚರ್ಚಿಸಿ ಸಿಎಂ ಯಡಿಯೂರಪ್ಪ ನಿರ್ಧರಿಸಲಿದ್ದಾರೆ. ಸಾಮಾಜಿಕ ನ್ಯಾಯ, ಭೌಗೋಳಿಕ ನ್ಯಾಯದಡಿಯಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಜಾತಿವಾರು, ಪ್ರಾಂತ್ಯವಾರು ಅವಕಾಶ ಕಲ್ಪಿಸಲಾಗುತ್ತದೆ ಎನ್ನುವ ಮಾಹಿತಿ ನೀಡಿದರು.
ಮಹಾರಾಷ್ಟ್ರ ಸರ್ಕಾರ ಉಳಿಸಿಕೊಳ್ಳಲಿ:
ಅಜಿತ್ ಪವಾರ್ ಮಹಾರಾಷ್ಟ್ರ ನೋಡಿಕೊಳ್ಳುವುದು ಒಳ್ಳೆಯದು. ಪ್ರಥಮ ಬಾರಿ ಬಂದಿರುವ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವುದು ಒಳ್ಳೆಯದು. ಕರ್ನಾಟಕದ ತಂಟೆಗೆ ಬರುವ ಅಗತ್ಯವಿಲ್ಲ. ಮಹಾರಾಷ್ಟ್ರವನ್ನು ಉಳಿಸುವುದಕ್ಕೆ ಪ್ರಯತ್ನ ಮಾಡಲಿ ಎಂದು ಕಟೀಲ್, ಅಜಿತ್ ಪವಾರ್ಗೆ ತಿರುಗೇಟು ನೀಡಿದರು.