ಬೆಂಗಳೂರು: ಒಕ್ಕಲಿಗರ ಸಂಘದ ಶಿಕ್ಷಣ ಸಂಸ್ಥೆಗೆ 75 ಲಕ್ಷ ರೂ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ವಂಚನೆ, ಚೆಕ್ ಬೌನ್ಸ್ ಸೇರಿದಂತೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಗಳಿಂದ ಪಡೆದು ದುರುಪಯೋಗಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ಅಪ್ಪಾಜಿಗೌಡ, ಬೆಟ್ಟೇಗೌಡ ಹಾಗೂ ಡೆಂಟಲ್ ಆಸ್ಪತ್ರೆಯ ಮಾಜಿ ಚೇರ್ಮನ್ ಜಿ.ಎಲ್.ನರೇಂದ್ರ ಬಾಬು, ಮಾಜಿ ನಿರ್ದೇಶಕ ಅಚ್ಚೇಗೌಡ ಶಿವಣ್ಣ ಎನ್ನುವವರ ವಿರುದ್ಧ ಎಫ್ಐಆರ್ಗಳು ದಾಖಲಾಗಿವೆ.
ಮೊದಲ ಪ್ರಕರಣ: ವಿದ್ಯಾರ್ಥಿ ಅಮೃತ್ ರಾಜ್ ರಾಜ್ ಎಂಬಾತನಿಗೆ 2016-17ನೇ ಸಾಲಿನಲ್ಲಿ ಎಂಬಿಬಿಎಸ್ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ 40 ಲಕ್ಷ ರೂ ಹಣ ಪಡೆದುಕೊಂಡು ಸಂಘಕ್ಕೆ ಕೇವಲ15 ಲಕ್ಷ ರೂ ಕಟ್ಟಿರುತ್ತಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ಸಿಇಒ ಡಾ.ಸಿದ್ದರಾಮಯ್ಯ ವಿವಿ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಿದ್ಯಾರ್ಥಿಯಿಂದ ಸಂಗ್ರಹಿಸಿದ ಹಣವನ್ನು ಸಂಘಕ್ಕೆ ಕಟ್ಟುವ ಸಂಬಂಧ ಹಿಂದಿನ ಅಧ್ಯಕ್ಷರಾದ ಡಿ.ಎನ್.ಬೆಟ್ಟೇಗೌಡ ವಿದ್ಯಾರ್ಥಿಗಳ ಅಡ್ಮಿಶನ್ ಟಿಕೆಟ್ ಕೊಡಲು ಶಿಫಾರಸು ಮಾಡಿದ್ದರು. ಉಳಿದ 25 ಲಕ್ಷ ರೂ ಗಳನ್ನು ಸಂಘದ ನಿರ್ದೇಶಕರಾದ ಅಚ್ಚೇಗೌಡ ಶಿವಣ್ಣ ಸಂಘಕ್ಕೆ ಸಂದಾಯ ಮಾಡದೇ ಸ್ವಂತಕ್ಕೆ ಬಳಸಿಕೊಂಡಿದ್ದರು.
ನಂತರ ಹಣವನ್ನು ಸುಧಾ ಕೋ-ಆಪರೇಟಿವ್ ಬ್ಯಾಂಕ್ ಅಕೌಂಟ್‌ಗೆ ಸಂಬಂಧಿಸಿದ ಚೆಕ್‌ನಲ್ಲಿ 5 ಲಕ್ಷ ಹಾಗೂ ಸುನಿತಾ ಎನ್ನುವವರ ಹೆಸರಿನಲ್ಲಿರುವ ಕೆನರಾ ಬ್ಯಾಂಕ್ ಚೆಕ್‌ನಲ್ಲಿ 5 ಲಕ್ಷ ರೂ ಹಾಗೂ ಅದೇ ಬ್ಯಾಂಕ್ ಮತ್ತೊಂದು ಚೆಕ್ ನಲ್ಲಿ 5 ಲಕ್ಷ ರೂ, ಮತ್ತು ಇನ್ನೊಂದು ಚೆಕ್ ನಲ್ಲಿ 5 ಲಕ್ಷ ರೂ ಹಾಗೂ ಮತ್ತೊಂದು ಚೆಕ್‌ನಲ್ಲಿ 5 ಲಕ್ಷ ರೂ.ಗಳನ್ನು ನಮೂದಿಸಿ ಕೊಟ್ಟಿದ್ದಾರೆ.
ಆದರೆ, ಈ ಚೆಕ್ ಗಳ ಖಾತೆಗಳಲ್ಲಿ ಹಣವಿಲ್ಲ ಎಂದು ಬೌನ್ಸ್ ಆಗಿವೆ. ದುರುದ್ದೇಶದಿಂದ ಒಳಸಂಚು ಮಾಡಿ ವಿದ್ಯಾರ್ಥಿಯಿಂದ ಪಡೆದುಕೊಂಡಿದ್ದು, 40 ಲಕ್ಷ ರೂ ಹಣದಲ್ಲಿ 15 ಲಕ್ಷ ರೂ ಗಳನ್ನು ಮಾತ್ರ ಸಂದಾಯ ಮಾಡಿ ಉಳಿದ 25 ಲಕ್ಷ ರೂ ಗಳನ್ನು ಸಂಘಕ್ಕೆ ಕಟ್ಟದೇ ಸ್ವಂತಕ್ಕೆ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣ ಎರಡು:
ಮತ್ತೊಂದು ಪ್ರಕರಣದಲ್ಲಿ ಸಾಕ್ಷಿ ಎಂಬ ವಿದ್ಯಾರ್ಥಿನಿಗೆ ಎಂಬಿಬಿಎಸ್ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ ಅಪ್ಪಾಜಿಗೌಡ ಮತ್ತು ಡೆಂಟಲ್ ಕಾಲೇಜಿನ ಮಾಜಿ ಚೇರ್ಮನ್ ನರೇಂದ್ರಬಾಬು 2016-17 ಶೈಕ್ಷಣಿಕ ಸಾಲಿನಲ್ಲಿ 50 ಲಕ್ಷ ರೂ ಹಣ ಪಡೆದು ಸಂಘಕ್ಕೆ ಕೇವಲ 20 ಸಾವಿರ ರೂ. ಕಾಲೇಜು ಶುಲ್ಕವನ್ನು ಕಟ್ಟಿದ್ದಾರೆ.
ವಿದ್ಯಾರ್ಥಿನಿಯಿಂದ ಸಂಗ್ರಹಿಸಿದ ಹಣವನ್ನು ಸಂಘಕ್ಕೆ ಕಟ್ಟುವ ಸಂಬಂಧ ಅಪ್ಪಾಜಿಗೌಡ 30 ಲಕ್ಷ ರೂ ಹಣಕ್ಕೆ ತಮ್ಮ ಹೆಸರಿನಲ್ಲಿದ್ದ ವಿಜಯಾ ಬ್ಯಾಂಕ್ ಗೆ ಸೇರಿದ ಚೆಕ್ ನೀಡಿದ್ದಾರೆ. ಆದರೆ, ಚೆಕ್ ಖಾತೆಯಲ್ಲಿ ಹಣವಿಲ್ಲ ಎಂದು ವಾಪಸಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿತರು ಹಣ ಮಾಡಬೇಕೆಂಬ ದುರುದ್ದೇಶದಿಂದ ಒಳಸಂಚು ಮಾಡಿಕೊಂಡು ವಿದ್ಯಾರ್ಥಿನಿಯಿಂದ ಪಡೆದುಕೊಂಡಿದ್ದ 50 ಲಕ್ಷ ರೂ ಹಣವನ್ನು ಸಂಘಕ್ಕೆ ಕಟ್ಟದೇ ಸ್ವಂತಕ್ಕೆ ಉಪಯೋಗಿಸಿಕೊಂಡು ಮೋಸ ಮಾಡಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯ ನಿರ್ವಹಣಾಧಿಕಾರಿ ಡಾ.ಸಿದ್ದರಾಮಯ್ಯ ವಿವಿ ಪುರಂ ಪೊಲೀಸ್ ಠಾಣೆಗೆ ಮತ್ತೊಂದು ದೂರು ನೀಡಿದ್ದಾರೆ.