ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬರುತ್ತಿದ್ದಂತೆ ವಿಧಾನಸಭೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ನೂತನ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸ್ಪೀಕರ್ ಆಗಿ ಚುನಾಯಿಸುವಂತೆ ಸಿಎಂ ಯಡಿಯೂರಪ್ಪ ಪ್ರಸ್ತಾವ ಮಂಡನೆ ಮಾಡಿದರು. ಸಿಎಂ ಪ್ರಸ್ತಾವಕ್ಕೆ ಶಾಸಕ ಬಸವರಾಜ ಬೊಮ್ಮಾಯಿ ಅನುಮೋದಿಸಿದರು. ಈ ಪ್ರಸ್ತಾವವನ್ನು ಡೆಪ್ಯುಟಿ ಸ್ಪೀಕರ್ ಮತಕ್ಕೆ ಹಾಕಿದಾಗ ಧ್ವನಿಮತದ ಮೂಲಕ ಕಾಗೇರಿ ಅವರನ್ನು ಸ್ಪೀಕರ್ ಆಗಿ ಚುನಾಯಿಸಲಾಯಿತು.
ಅವಿರೋಧ ಆಯ್ಕೆಯಾದ ಕಾಗೇರಿ ಅವರನ್ನು ಸ್ಪೀಕರ್ ಪೀಠದ ಬಳಿ ಸಭಾನಾಯಕ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕರೆತಂದರು. ಇಬ್ಬರೂ ನಾಯಕರು ಕಾಗೇರಿ ಅವರಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.
ಈ ವೇಳೆ, ಕಾಗೇರಿ ಕುಟುಂಬಸ್ಥರು ಸದನದ ವೀಕ್ಷಕರ ಗ್ಯಾಲರಿಯಲ್ಲಿ ಕೂತಿರುವ ಆಯ್ಕೆ ವಿಧಿವಿಧಾನ ವೀಕ್ಷಿಸಿದರು. ಬಳಿಕ ಮಾತನಾಡಿದ ಸಿಎಂ, ಇಡೀ ಸದನದ ಘನತೆ ಕಾಪಾಡ್ತೀರಿ ಎಂಬ ಭರವಸೆ ನಮಗಿದೆ. ಪಕ್ಷಾತೀತವಾಗಿ ಕೆಲಸ ಮಾಡ್ತೀರಿ ಅಂತ ನಂಬಿದ್ದೇವೆ. ಸ್ಪೀಕರ್ ಪಕ್ಷಾತೀತವಾಗಿ ಆಯ್ಕೆ ಆಗಬೇಕು. ಹಾಗಾಗಿ ನಮ್ಮ ಪಕ್ಷದಿಂದ ನಾವು ಅಭ್ಯರ್ಥಿ ಹಾಕಲಿಲ್ಲ. ಹಿಂದಿನ ಸ್ಪೀಕರ್ ಬಿಟ್ಟು ಹೋದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೀರಿ ಎಂಬ ಭರವಸೆ ಇದೆ ಎಂದು ಹೇಳಿದರು.
ಆನಂತರ ಉದ್ಯಮಿ ಸಿದ್ಧಾರ್ಥ್ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ, ಸ್ಪೀಕರ್ ಅವರ ಅನುಮತಿ ಪಡೆದು ಚಿಕ್ಕಮಗಳೂರಿಗೆ ತೆರಳಿದರು. ಇದೇ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀವು ಇನ್ಮುಂದೆ ಪಕ್ಷಾತೀತವಾಗಿ ವರ್ತಿಸಬೇಕು. ಈ ಹಿಂದಿನ ಎಲ್ಲ ಸಂಘಟನೆಗಳ ಬಂಧದಿಂದ ಹೊರ ಬರಬೇಕಿದೆ ಎಂದು ಹೇಳಿದರು.