ಬೆಂಗಳೂರು : ತಮಿಳುನಾಡು ಮೂಲದ ವಿಶ್ವಪ್ರಿಯ ಫೈನಾನ್ಸಿಯಲ್ ಸರ್ವಿಸಸ್ ಸೆಕ್ಯೂರಿಟೀಸ್ ಸಂಸ್ಥೆ ವಿರುದ್ಧ ಹೂಡಿಕೆದಾರರಿಗೆ ವಂಚನೆ ಮಾಡಿರುವ ಆರೋಪದಡಿ ದಾಖಲಿಸಿರುವ ಎಫ್ಐಆರ್ ಮೇರೆಗೆ ಈವರೆಗೆ ನಡೆಸಿರುವ ತನಿಖಾ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ನಗರ ಪೊಲೀಸರಿಗೆ ನಿರ್ದೇಶಿಸಿದೆ.
ಈ ಕುರಿತು ವಿಶ್ವಪ್ರಿಯ ಇನ್ವೆಸ್ಟರ್ಸ್ ಅಂಡ್ ಡೆಪಾಸಿಟರ್ಸ್ ವೆಲ್‌ಫೇರ್ ಅಸೋಸಿಯೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ವಿಶ್ವಪ್ರಿಯ ಸಂಸ್ಥೆ ಮುಖ್ಯಸ್ಥ ಸುಬ್ರಮಣಿಯನ್ ಖುದ್ದಾಗಿ ವಿಚಾರಣೆಗೆ ಹಾಜರಾಗಿ ಅರ್ಜಿ ಸಂಬಂಧ ವಿವರವಾದ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಜತೆಗೆ ಅರ್ಜಿದಾರರ ಆರೋಪಗಳಲ್ಲಿ ಹುರುಳಿಲ್ಲ ಎಂದು ವಾದಿಸಿದರು.
ವಾದ ಆಲಿಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶ್ವಪ್ರಿಯ ಸಂಸ್ಥೆ ಮುಖ್ಯಸ್ಥರಿಗೆ ಕಾಲಾವಕಾಶ ನೀಡಿತು. ಇದೇ ವೇಳೆ ಅರ್ಜಿದಾರರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿರುವ ಎಫ್ಐಆರ್‌ಗಳ ಸಂಬಂಧ ಈವರೆಗೆ ನಡೆಸಿರುವ ತನಿಖಾ ವರದಿಯನ್ನ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮಾ.31ಕ್ಕೆ ಮುಂದೂಡಿತು.
ಅರ್ಜಿದಾರರ ಆರೋಪ : 2012-13ರಲ್ಲಿ ಸುಬ್ರಮಣಿಯನ್, ನಾರಾಯಣ್ ಮತ್ತಿತರರು ವಿಶ್ವಪ್ರಿಯ ಫೈನಾನ್ಸಿಯಲ್ ಸರ್ವೀಸಸ್ ಸೆಕ್ಯೂರಿಟೀಸ್ ಏಜೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು. ಅದರಂತೆ ಲಕ್ಷಾಂತರ ರೂ. ಹಣವನ್ನು ಸಂಸ್ಥೆ ಹೆಸರಲ್ಲಿ ಠೇವಣಿ ಇರಿಸಿದ್ದೆವು.
ಈ ರೀತಿ ನಗರದ ಸಾವಿರಾರು ಜನ ಸಂಸ್ಥೆಯಲ್ಲಿ 200 ರಿಂದ 300 ಕೋಟಿ ರೂ. ಹೂಡಿಕೆ ಮಾಡಿರುವ ಮಾಹಿತಿ ಇದೆ. ಇದಕ್ಕೆ ಕಂಪನಿ ವಾರ್ಷಿಕ ಶೇ. 10.47 ರಷ್ಟು ರಿಟರ್ಸ್ ಕೊಡುವುದಾಗಿ ಭರವಸೆ ನೀಡಿದ್ದರೂ ಹಣ ಹಿಂದಿರುಗಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅಲ್ಲದೇ, ಹಣ ಬಾರದ ಹಿನ್ನೆಲೆ 2020ರ ಡಿ.29ರಂದು ನಗರದ ಗಿರಿನಗರ, ಸಿದ್ದಾಪುರ, ಜಯನಗರ, ವೈಟ್‌ಫೀಲ್ಡ್, ಮಲ್ಲೇಶ್ವರಂ, ಅಲಸೂರು, ಮಾರತ್ತಹಳ್ಳಿ ಪೊಲೀಸ್ ಠಾಣೆಗಳಲ್ಲಿ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ.
ಕೆಪಿಐಡಿ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದರೂ, ತನಿಖೆ ಚುರುಕಾಗಿಲ್ಲ ಹಾಗೂ ಪ್ರಗತಿ ಕಾಣುತ್ತಿಲ್ಲ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.