ಕನ್ನಡ ಚಿತ್ರರಂಗದ ಸಾಹಸಸಿಂಹ ಖ್ಯಾತಿಯ ಡಾ. ವಿಷ್ಣುವರ್ಧನ್ ಇಹಲೋಕ ತ್ಯಜಿಸಿ ಇಂದಿಗೆ 14 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ 'ಕೋಟಿಗೊಬ್ಬ'ನ 14ನೇ ವರ್ಷದ ಪುಣ್ಯತಿಥಿಯನ್ನು ಅಭಿಮಾನ್ ಸ್ಟುಡಿಯೋದಲ್ಲಿ ಮಾಡಲಾಗುತ್ತಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ವಿಷ್ಣುವರ್ಧನ್ ಅವರ ಸಮಾಧಿ ಬಳಿ ಆಗಮಿಸಿ ನಮನ, ಪೂಜೆ ಸಲ್ಲಿಸುತ್ತಿದ್ದಾರೆ. ವಿಷ್ಣುದಾದಾ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನ್ ಸ್ಟುಡಿಯೋದಲ್ಲಿ ರಕ್ತದಾನ, ನೇತ್ರದಾನ, ಅನ್ನದಾನದಂತಹ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಕನ್ನಡ ಚಿತ್ರರಂಗದ ಕೀರ್ತಿ ಎಂದೇ ಖ್ಯಾತರಾದ ಹೆಸರಾಂತ ನಟ ವಿಷ್ಣುವರ್ಧನ್ ಅವರು 2009ರ ಡಿಸೆಂಬರ್ 30ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು. ಅಂದು ಅದೆಷ್ಟೋ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿತ್ತು. ದೈಹಿಕವಾಗಿ ಅವರು ನಮ್ಮೊಂದಿಗಿಲ್ಲವಾದರೂ, ಅವರ ನೆನಪು ಮಾತ್ರ ಕೋಟ್ಯಂತರ ಜನರಲ್ಲಿ ಅಚ್ಚಳಿಯದೇ ಉಳಿದಿದೆ. ಇಂದಿಗೂ ಅವರ ಹೆಸರಲ್ಲಿ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿದೆ. ಕನ್ನಡಿಗರ ಮೆಚ್ಚಿನ ನಟ ವಿಷ್ಣುವರ್ಧನ್ ಅಗಲಿ 14 ವರ್ಷಗಳಾದರೂ ಸ್ಮಾರಕ ವಿಚಾರವಾಗಿ ಅಭಿಮಾನಿಗಳಲ್ಲಿ ಅಸಮಾಧಾನವಿದೆ.
ವಿಷ್ಣುವರ್ಧನ್ ಹುಟ್ಟುಹಬ್ಬ ಹಾಗೂ ಪುಣ್ಯತಿಥಿ ಕಾರ್ಯ ಎಂದು ಬಂದಾಗ ವಿಷ್ಣುದಾದಾ ಪೂಜೆ ಎಲ್ಲಿ ಮಾಡಬೇಕೆಂಬ ಗೊಂದಲ ಸಹಜವಾಗಿ ಎಲ್ಲರಲ್ಲೂ ಇದೆ. ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿ, ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ವಿಷ್ಣುವರ್ಧನ್ ಅವರ ಪೂಜೆಯನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿನ ಅವರ ಸಮಾಧಿ ಬಳಿ ಮಾಡುತ್ತಿದ್ದಾರೆ. ಸಮಾಧಿ, ಸ್ಮಾರಕಕ್ಕಾಗಿ ಅಭಿಮಾನಿಗಳು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ, ಸಮಾಧಿ ಬಳಿ ಯಾವುದೇ ಸಮಸ್ಯೆ ಆಗಬಾರದು ಎಂದು ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಲಾಗಿದೆ. ಒಂದು ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ.
ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ಗೆ ಫ್ಯಾನ್ಸ್ ಫಿದಾ; ಮೊದಲ ದಿನವೇ 'ಕಾಟೇರ' ಭರ್ಜರಿ ಗಳಿಕೆ
ವಿಷ್ಣುವರ್ಧನ್ ಪುಣ್ಯ ಭೂಮಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಅಭಿಮಾನಿಗಳ ಅಕ್ರೋಶ ಮುಂದುವರೆದಿದೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ಆಗಬೇಕೆಂದು ಹೋರಾಟ ನಡೆಸಿದ್ದರು. ಈ ಅಭಿಮಾನಿಗಳ ಹೋರಾಟಕ್ಕೆ ಕಿಚ್ಚ ಸುದೀಪ್, ಡಾಲಿ ಧನಂಜಯ್ ಸೇರಿದಂತೆ ಸಾಕಷ್ಟು ಜನರು ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ವಿಷ್ಣುವರ್ಧನ್ ಅಭಿಮಾನಿಗಳ ಸಂಘದವರು ಫಿಲ್ಮ್ ಚೇಂಬರ್ಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದರು. ಈ ಸಮಸ್ಯೆ ಬಗೆಹರಿಯದಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: 'ವಿಜಯಕಾಂತ್ ನಿಧನ ತುಂಬಲಾರದ ನಷ್ಟ': ಅಂತಿಮ ದರ್ಶನ ಪಡೆದ ರಜನಿಕಾಂತ್