ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರೇಸ್ ಕುದುರೆಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಮುಂದಿನ ಒಂದು ಅಥವಾ ಒಂದೂವರೆ ವರ್ಷದಲ್ಲಿ ಬಿಟಿಸಿ ಒಳಗಿರುವ ಕುದುರೆ ಲಾಯಗಳ ನವೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಸೇರಿದಂತೆ ಕುದುರೆಗಳ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಟರ್ಫ್ ಕ್ಲಬ್ ನೀಡಿದ ಪ್ರಮಾಣ ಪತ್ರ ಆಧರಿಸಿ ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿದೆ.
ಬಿಟಿಸಿಯಲ್ಲಿ ರೇಸ್ಗೆ ಬಳಸುವ ಕುದುರೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ಅವುಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಪ್ರಾಣಿದಯಾ ಸಂಘಟನೆ ಕ್ಯೂಪಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಟರ್ಫ್ ಕ್ಲಬ್ ಪರ ವಕೀಲರು ಹಾಜರಾಗಿ, ಕೋರ್ಟ್ ಸೂಚನೆಯಂತೆ ಭಾರತೀಯ ಪ್ರಾಣಿ ಮಂಡಳಿ (ಎಡಬ್ಲುಬಿಐ ) ನೇಮಿಸಿದ್ದ ಇನ್ಸ್‌ಪೆಕ್ಟರ್ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಕಲ್ಪಿಸಿರುವ ಸೌಲಭ್ಯ ಮತ್ತು ಅಭಿವೃದ್ಧಿಗಳ ಕುರಿತು 2022 ಜನವರಿ 3ರಂದು ಪರಿಶೀಲಿಸಿ ವರದಿ ನೀಡಿದ್ದಾರೆ.
ಪ್ರಕರಣದಲ್ಲಿ ಕಾಲಕಾಲಕ್ಕೆ ನ್ಯಾಯಾಲಯ ನೀಡಿರುವ ನಿರ್ದೇಶನಗಳನ್ನು ಭಾಗಶಃ ಪಾಲಿಸಲಾಗಿದೆ. ಕುದುರೆ ಲಾಯ ನವೀಕರಣ ಮತ್ತು ಉನ್ನತೀಕರಣ ಕಾರ್ಯ ನಡೆದಿದ್ದು, ಪೂರ್ಣಗೊಳ್ಳಲು ಒಂದರಿಂದ ಒಂದೂವರೆ ವರ್ಷ ಕಾಲಾವಕಾಶ ಬೇಕಿದೆ. ಕುದುರೆ ಶಸ್ತ್ರಚಿಕಿತ್ಸಾ ಕೇಂದ್ರದ ನಿರ್ಮಾಣ ಕೆಲಸ ನಡೆಯುತ್ತಿದೆ. ಅದನ್ನು ತುರ್ತಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಬಿಟಿಸಿಯ ಸುಧಾರಣೆ ದೃಷ್ಟಿಯಿಂದ ಹಲವಾರು ಉನ್ನತೀಕರಣ ಕೆಲಸಗಳು ನಡೆಯುತ್ತಿದೆ. ಈ ಎಲ್ಲ ಕಾಮಗಾರಿಗಳನ್ನು ತಡ ಮಾಡದೇ ಪೂರ್ಣಗೊಳಿಸಬೇಕು. ಎಡಬ್ಲುಬಿಐ ನೇಮಿಸಿರುವ ಇನ್ಸ್‌ಪೆಕ್ಟರ್ ಅಗತ್ಯಬಿದ್ದಾಗ ಬೆಂಗಳೂರು ಟರ್ಫ್ ಕ್ಲಬ್‌ಗೆ ಭೇಟಿ ನೀಡಿ ಅಲ್ಲಿ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಅಭಿವೃದ್ಧಿ ಕೆಲಸ ನಡೆಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬಹುದು ಹಾಗೂ ಮೇಲ್ವಿಚಾರಣೆ ನಡೆಸಬಹುದು.
ಒಂದೊಮ್ಮೆ ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬುದು ಕಂಡುಬಂದರೆ ಅರ್ಜಿದಾರರು ಮತ್ತೆ ಅರ್ಜಿ ಸಲ್ಲಿಸಲು ಸ್ವತಂತ್ರವಾಗಿದ್ದಾರೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.
ಇದನ್ನೂ ಓದಿ: 'ಪಕ್ಷವನ್ನು ನೀವು ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳಿ': ಸಿದ್ದರಾಮಯ್ಯಗೆ ಯತ್ನಾಳ್ ಸಲಹೆ