ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಸೇರ್ಪಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತ ಮತ್ತು ಬಿಬಿಎಂಪಿ ಆಯುಕ್ತರಿಗೆ ದಾಖಲೆಗಳ ಸಹಿತ ದೂರುಗಳನ್ನು ನೀಡಲಾಗಿತ್ತು. ಆದರೆ ಈ ಸಂಬಂಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್. ಆರ್. ರಮೇಶ್ ಮತ್ತೊಮ್ಮೆ ಆಯುಕ್ತರಿಗೆ, ಆಡಳಿತಗಾರರಿಗೆ ಪತ್ರ ಬರೆದಿದ್ದಾರೆ.
ಜನವರಿ 3 ರಂದು ರಾಜಧಾನಿಯ ಸುಮಾರು 13 ವಿಧಾನಸಭಾ ಕ್ಷೇತ್ರಗಳಲ್ಲಿ ಹೊರ ರಾಜ್ಯಗಳ 1,50,000 ಕ್ಕೂ ಹೆಚ್ಚು ಅಲ್ಪಸಂಖ್ಯಾತ ಜನರನ್ನು ಸೇರಿಸಿರುವ ಸಂಬಂಧ ಮತ್ತು ಕಳೆದ ವರ್ಷದ ಡಿಸೆಂಬರ್ 15 ರಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 4,700 ಕ್ಕೂ ಹೆಚ್ಚು ಹೊರ ರಾಜ್ಯಗಳ ಅಲ್ಪ ಸಂಖ್ಯಾತ ಮತದಾರರನ್ನು ಚಿಕ್ಕಪೇಟೆ ವಿಭಾಗದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ವಿಷಯವನ್ನೂ ಸಹ ದಾಖಲೆಗಳ ಸಹಿತ ಪಾಲಿಕೆಯ ಆಯುಕ್ತ, ವಿಶೇಷ ಆಯುಕ್ತ (ಕಂದಾಯ) ಮತ್ತು ಜಂಟಿ ಆಯುಕ್ತ (ಕಂದಾಯ) ಇವರ ಗಮನಕ್ಕೆ ತರಲಾಗಿತ್ತಲ್ಲದೇ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕೂಡ ಕೋರಲಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುಂದುವರೆದು, ಮಾರ್ಚ್ 19 ರಂದು ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ 170 ರಲ್ಲಿ ಕಂದಾಯ ಪರಿವೀಕ್ಷಕರು ಮತ್ತು ಕಂದಾಯ ವಸೂಲಿಗಾರರು ಕಾನೂನು ಬಾಹಿರವಾಗಿ ವೀರನ್ ಏಳುಮಲೈ ಎಂಬ ಸಹಾಯಕನೊಬ್ಬನನ್ನು ನಿಯೋಜಿಸಿಕೊಂಡು ವೀರನ್ ಏಳುಮಲೈ ಎಂಬುವವನ ಮುಖಾಂತರ ನೂರಾರು ಜನ ಹೊರ ಪ್ರದೇಶಗಳ ಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಸಿದ್ದ ವಿಷಯವನ್ನೂ ಸಹ ದಾಖಲೆಗಳ ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ಸಹ ನೀಡಲಾಗಿತ್ತು ಎಂದಿದ್ದಾರೆ.
ಮೂರು ಪ್ರಕರಣಗಳಲ್ಲಿ ನಿಯಮಬಾಹಿರ ವರ್ತನೆ: ಈ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಯಮಬಾಹಿರವಾಗಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನಮ್ಮ ನೆರೆಯ ರಾಜ್ಯಗಳಾದ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ, ಹೊಸೂರು, ಕೇರಳ ರಾಜ್ಯದ ಕಾಸರಗೂಡು, ಕಣ್ಣೂರು ಜಿಲ್ಲೆಗಳ ಮತ್ತು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಮತ್ತು ಬಂಗಾರುಪಾಳ್ಯ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರನ್ನು ಇಲ್ಲಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಲೀ ಮತ್ತು ಈ ರೀತಿ ನಿಯಮಬಾಹಿರವಾಗಿ ಸೇರಿಸಲ್ಪಟ್ಟ ಮತದಾರರನ್ನು ಸ್ಥಳ ಪರಿಶೀಲನೆ ಮಾಡಿ ಆ ಮತದಾರರ ಪಟ್ಟಿಯಿಂದ ತೆಗೆಯುವ ಕೆಲಸವನ್ನಾಗಲೀ, ಈವರೆಗೆ ಮಾಡದೇ ಕರ್ತವ್ಯ ಲೋಪವನ್ನು ಬಿಬಿಎಂಪಿಯ ಕಂದಾಯ ಇಲಾಖೆಯ ಅಧಿಕಾರಿಗಳು ಎಸಗಿದ್ದಾರೆ ಎಂದು ದೂರಿದ್ದಾರೆ.
ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮತ್ತೊಮ್ಮೆ ಮನವಿ ಪತ್ರ: ಕೂಡಲೇ ಈ ರೀತಿ ಸೇರ್ಪಡೆ ಮಾಡಿರುವ ಹೊರ ರಾಜ್ಯಗಳ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯುವ ಬಗ್ಗೆ ಮತ್ತು ಈ ರೀತಿ ಕಾನೂನು ಬಾಹಿರ ಕಾರ್ಯಗಳನ್ನು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮತ್ತೊಮ್ಮೆ ಇಂದು ಮನವಿ ಪತ್ರಗಳನ್ನು ನೀಡಿದ್ದೇನೆ ಎಂದು ಆಡಳಿತ ಪಕ್ಷದ ಮಾಜಿ ನಾಯಕರೂ ಅದ ಎನ್.ಆರ್. ರಮೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಹಾಗೂ ಬಿಡಿಎಗಳ ಆಸ್ತಿ ಜನರ ಸೇವೆಗೆ ಬಳಕೆಯಾಗಬೇಕು: ಸಿಎಂ ಬೊಮ್ಮಾಯಿ