ಬಳ್ಳಾರಿ/ಬೆಂಗಳೂರು: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸಾವನ್ನಪ್ಪಿರುವ ಮೂವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಕೆ.ಆರ್.ವೃತ್ತದ ಯುವಿಸಿಇಯಲ್ಲಿ ಆಯೋಜಿಸಿದ್ದ ವಿಶ್ವೇಶ್ವರಯ್ಯ ಇಂಜಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದ ಲೋಕಾರ್ಪಣೆ ಹಾಗೂ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ 162ನೇ ಜನ್ಮ ದಿನೋತ್ಸವದ ನಿಮಿತ್ತ ನಡೆದ ಅಭಿಯಂತರರ ದಿನಾಚರಣೆಯನ್ನು ಸಿಎಂ ಬೊಮ್ಮಾಯಿ ಉದ್ಘಾಟಿಸಿದರು.
ಇದನ್ನೂ ಓದಿ: ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಮೂವರಲ್ಲ ನಾಲ್ಕು ಜನ.. ಮೃತ ಮನೋಜ್ ಕುಟುಂಬಸ್ಥರ ಆರೋಪ
ಈ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ದುರ್ಘಟನೆಯಲ್ಲಿ ಸಾವನ್ನಪ್ಪಿದ ಮೂವರು ರೋಗಿಗಳ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಬೆಂಗಳೂರಿಗೆ ಬರುವ ಬಗ್ಗೆ ಇನ್ನೂ ಖಾತ್ರಿಯಾಗಿಲ್ಲ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ರೋಗಿಗಳು ಸಾವನ್ನಪ್ಪಿರುವ ಪ್ರಕರಣವನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿತ್ತು. ಅಲ್ಲದೇ, ವಿಧಾನಸಭೆಯಲ್ಲಿಯೂ ಈ ವಿಚಾರ ಸದ್ದು ಮಾಡಿತ್ತು. ಮೃತ ಕುಟುಂಬಸ್ಥರಿಗೆ ತಲಾ 25 ಲಕ್ಷ ಪರಿಹಾರಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ವೆಂಟಿಲೇಟರ್ ಸಮಸ್ಯೆ ಆಗಿಲ್ಲ, ವಿದ್ಯುತ್ ಕೈಕೊಟ್ಟಿದ್ದರಿಂದ ಸಾವಾಗಿಲ್ಲ: ಡಿಸಿ ಪವನ್ ಕುಮಾರ್ ಮಾಲಪಾಟಿ