ಬೆಂಗಳೂರು: ಇಂದು ಬಿಎಸ್ವೈ ಪುತ್ರ ವಿಜಯೇಂದ್ರ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಯಡಿಯೂರಪ್ಪ ಹುಟ್ಟುಹಬ್ಬದ ಅಂಗವಾಗಿ 27ರಂದು ನಡೆಯುವ ಅಭಿನಂದನಾ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.
ಭೇಟಿ ನಂತರ ಮಾತನಾಡಿದ ವಿಜಯೇಂದ್ರ, ನಮ್ಮ ತಂದೆ ಫೆ. 27ರಂದು 78ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹಾಗಾಗಿ, ಅರಮನೆ ಆವರಣದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಆಗಮಿಸುವಂತೆ ಸಿದ್ದರಾಮಯ್ಯನವರನ್ನು ಆಹ್ವಾನಿಸಲು ಬಂದಿದ್ದಾಗಿ ಹೇಳಿದರು. ಇನ್ನು ಪಾಕ್ ಪರ ಯುವತಿ ಘೋಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದ ಹಿಂದೆ ಯಾವ ಸಂಘಟನೆ ಇದೆ ಎಂಬುದನ್ನು ಕೇಂದ್ರ ಗೃಹ ಇಲಾಖೆ ಗಮನಿಸುತ್ತಿದೆ.
ಇಂತಹ ಕೆಲಸಗಳಿಗೆ ಎಲ್ಲಿಂದ ಹಣ ಬರುತ್ತಿದೆ. ಯಾರೆಲ್ಲಾ ಸಂಚು ರೂಪಿಸುತ್ತಿದ್ದಾರೆಂದು ತನಿಖೆ ನಡೆಸಲಾಗುತ್ತಿದೆ ಎಂದರು. ಬಿಜೆಪಿ ಸರ್ಕಾರ ಇರುವ ಕಡೆ ಕೆಲವರ ಕುಚೇಷ್ಟೆ ಇರುತ್ತದೆ. ಈ ರೀತಿಯ ಭಾವನೆಗಳು ದೇಶಕ್ಕೆ ಒಳ್ಳೆಯದಲ್ಲ. ನಾನೂ ಕೂಡ ಮಾಧ್ಯಮದಲ್ಲಿ ಗಮನಿಸಿದ್ದೇನೆ. ಈ ವರ್ತನೆಯನ್ನು ಪಕ್ಷಾತೀತವಾಗಿ ವಿರೋಧಿಸಬೇಕಿದೆ ಎಂದು ವಿಜಯೇಂದ್ರ ಹೇಳಿದರು.