ಬೆಂಗಳೂರು: ಆಲಮಟ್ಟಿ ಅಣೆಕಟ್ಟಿನ ವಿಚಾರವಾಗಿ ನಡೆದ ಗಂಭೀರ ಚರ್ಚೆ ವೇಳೆ ಸಚಿವ ಮಾಧುಸ್ವಾಮಿ, ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ್ ನಡುವೆ ವಾಕ್ಸಮರ ನಡೆಯಿತು.
ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಆಲಮಟ್ಟಿ ಆಣೆಕಟ್ಟಿನ ವಿಚಾರವನ್ನು ನಿಯಮ 330 ಅಡಿ ಪ್ರಸ್ತಾಪಿಸಿದರು. ಜಲಸಂಪನ್ಮೂಲ ಸಚಿವರ ಪರವಾಗಿ ಉತ್ತರ ನೀಡಲು ಮಾಧುಸ್ವಾಮಿ ಮುಂದಾದರು. ಸಚಿವರೇ ಉತ್ತರ ಕೊಡಲಿ ಎಂದು ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಹಠ ಹಿಡಿದರು.
ನಾವು ಸರ್ಕಾರದ ಭಾಗ ಉತ್ತರ ಕೊಡಬಹುದು ಎಂದು ಮಾಧುಸ್ವಾಮಿ ಹೇಳಿದಾಗ, ನಿಮ್ಮದು ಏನ್ ಜಿದ್ದು ಮಾಧುಸ್ವಾಮಿ ಅವರೇ, ಇದು ಉತ್ತರ ಕರ್ನಾಟಕ ಭಾಗದ ಜನರ ಬದುಕಿನ ಪ್ರಶ್ನೆ ಪಾಟೀಲ್ ಹೇಳಿದ್ದಕ್ಕೆ, ನಾನು ಸರ್ಕಾರದ ಸಚಿವ, ನಾನೇ ಉತ್ತರ ನೀಡುತ್ತೇನೆ ಎಂದು ಮಾಧುಸ್ವಾಮಿ ಹಠ ಹಿಡಿದರು. ಜೊತೆಗೆ ಜಲಸಂಪನ್ಮೂಲ ಸಚಿವರೇ ಇದರಲ್ಲಿ ಕಾನೂನಿನ ವಿಚಾರವೂ ಇದೆ, ನೀವೇ ಹೇಳಿ ಎಂದು ತಿಳಿಸಿದ್ದಾರೆಂದು ವಾದಿಸಿದರು. ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೆಯಿತು. ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಕಲಾಪವನ್ನು ಮಂಗಳವಾ ಬೆಳಗ್ಗೆ 10.30ಕ್ಕೆ ಮುಂದೂಡಿದರು.