ಬೆಂಗಳೂರು: ಕ್ರೈಸ್ತ ಸಮುದಾಯಕ್ಕೆ ಸರ್ಕಾರ 200 ಕೋಟಿ ರೂ. ನೀಡಿದ್ದರೂ ಸದ್ಬಳಕೆ ಆಗಿಲ್ಲ ಎಂದು ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಹೇಳಿದ್ದಾರೆ. ವಿಧಾನ ಪರಿಷತ್ನಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿ, 200 ಕೋಟಿ ರೂ. ಪ್ರಗತಿಗೆ ಬಳಕೆ ಆಗಬೇಕು. ಈ ಸಮುದಾಯಕ್ಕೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಕ್ರೈಸ್ತ ಸಮುದಾಯದ ಪ್ರಗತಿಗೆ ಹೆಚ್ಚು ಅನುದಾನ ನೀಡಿ ಎಂದರು.
ಅಡಿಕೆ ಕೊಳೆ ರೋಗ ಸಮಸ್ಯೆಗೆ ಪರಿಹಾರ ಬೇಕಿದೆ. ಅಡಿಕೆ ಬೆಳೆಗಾರರ ರಕ್ಷಣೆಗೆ ಸರ್ಕಾರ ಬರಬೇಕಿದೆ. ಪ್ರಸಕ್ತ ಬಜೆಟ್ನಲ್ಲಿ ಸಾಲದ ಬಡ್ಡಿ ಮನ್ನಾ ಮಾಡಿದ್ದು, ಸಮಾಧಾನದ ಸಂಗತಿ. ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ವರೆಗೆ ತೆರಳುತ್ತಿರುವ ಸಂದರ್ಭ ತಾವು ಅಡಿಕೆ ಬೆಳೆಗಾರರ ಬಗ್ಗೆ ಗಮನ ಹರಿಸಬೇಕೆಂದು ಕೋರಿದರು. ಕಸ್ತೂರಿ ರಂಗನ್ ವರದಿಯಿಂದ ಮನೆ ಕಟ್ಟಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಆಗುತ್ತಿಲ್ಲ. ಮನೆ ಕಟ್ಟಲು ಅವಕಾಶವನ್ನು ಮಾಡಿಕೊಡಬೇಕಿದೆ. ನರೇಗಾ ಯೋಜನೆಯಡಿ ಸಿಗಬೇಕಾದ ಸೌಲಭ್ಯ ಕೊಡಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಹಾಗೂ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪೂರ್ ಮಾತನಾಡಿ, ಕಬ್ಬು ಬೆಳೆಗಾರರ ಸಮಸ್ಯೆ ಹೇಳತೀರದ್ದಾಗಿದೆ. ರೈತ ಮಾರುಕಟ್ಟೆ ಹಂದಿಗಳ ಆವಾಸ ತಾಣವಾಗಿದೆ. ಇದನ್ನು ಅಭಿವೃದ್ಧಿ ಪಡಿಸಿ. ಮಾವು ಬೆಳೆಗಾರರು ಸಮಸ್ಯೆಯಲ್ಲಿದ್ದು ಇವರಿಗಾಗಿ ರಫ್ತು ಮಾರುಕಟ್ಟೆ ಸ್ಥಾಪಿಸಿ ಎಂದು ಕೇಳಿದರು. ಬ್ಯಾಂಕಿಂಗ್ ವ್ಯವಸ್ಥೆ, ಪ್ಯಾಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ವಿಜಯಪುರ, ಬದಾಮಿ, ಹಂಪಿಯಂತಹ ಪ್ರವಾಸಿ ತಾಣದ ಅಭಿವೃದ್ಧಿ ಪ್ರಸ್ತಾಪ ಆಗಿಲ್ಲ. ನೆರೆ ಪೀಡಿತರಿಗೆ ಪರಿಹಾರ ನೀಡಿಕೆ ಆಗಿಲ್ಲ. ಮಕ್ಕಳಿಗೆ ಉದ್ಯೋಗವಿಲ್ಲ. ಬಡ ಮಕ್ಕಳಿಗೆ ಸೌಲಭ್ಯ ಕಲ್ಪಿಸುತ್ತಾರೆ ಅಂದುಕೊಂಡಿದ್ದೆ, ನಿರಾಸೆಯಾಗಿದೆ ಎಂದರು.
ಭಗವದ್ ಧ್ವಜ ಒಬ್ಬರು, ಕೇಸರಿ ಧ್ವಜ ಒಬ್ಬರು ಹಿಡಿಯುತ್ತಾರೆ. ರಾಷ್ಟ್ರ ಧ್ವಜ ಹಿಡಿಯುವತ್ತ ಗಮನ ಹರಿಸಿ. ಕೇಸರಿ, ಹಸಿರು ಧ್ವಜ ಹಿಡಿಯುವ ಬದಲು ರಾಷ್ಟ್ರಧ್ವಜ ಹಿಡಿಯಬೇಕು. ಮಹಿಳೆಯರಿಗೆ ಅನುಕೂಲ ಆಗಬೇಕು. ಆಯೋಗಗಳು ನೆನೆಗುದಿಗೆ ಬಿದ್ದಿವೆ. ಅವಕ್ಕೆ ಜೀವ ತುಂಬಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ನಾವು ಮಾಡಿದ ಕೆಲಸವನ್ನು ತಮ್ಮದು ಎಂದು ಸರ್ಕಾರ ರಾಜ್ಯಪಾಲರ ಮೂಲಕ ಹೇಳಿಸಿಕೊಂಡಿದೆ. ಸಿಎಂ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಲಿಲ್ಲ. ಗೆಜ್ಜೆ ಕಟ್ಟಿಕೊಂಡು ಓಡಾಡಿದರು. ರೈತರ ಪರ ಕಾಳಜಿಗೆ ಅವರು ಕಾಳಜಿಯಿಂದ ಸುತ್ತಾಡಿದರು. ಆದರೆ ಒಬ್ಬರ ಕೈಲಿ ನಿರೀಕ್ಷಿತ ಅನುಕೂಲ ಆಗಿಲ್ಲ. ಸಂಪುಟ ಸದಸ್ಯರು ಇದ್ದರೆ ಅನುಕೂಲ ಆಗುತ್ತಿತ್ತು. ಹೈಕಮಾಂಡ್ ಅವರಿಗೆ ಸಹಕರಿಸಲಿಲ್ಲ. ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಕನಿಷ್ಠ ಸಾವಿರ ಕೋಟಿ ನಷ್ಟವಾಗಿತ್ತು. ರಾಜ್ಯ ಸರ್ಕಾರ 35 ಸಾವಿರ ಕೋಟಿ ರೂ. ನಷ್ಟದ ವರದಿ ಕಳಿಸಿತ್ತು. ಕೇಂದ್ರ ನೀಡಿದ್ದು ಸಣ್ಣ ಮೊತ್ತವಾಗಿದ್ದು, ರಾಜ್ಯದ ಸಂಸದರು 25 ಮಂದಿ ಆಯ್ಕೆಯಾಗಿದ್ದು ಮಾತನಾಡುತ್ತಿಲ್ಲ ಎಂದರು.
ಇನ್ನು ಕಾಂಗ್ರೆಸ್ ಸದಸ್ಯ ಪ್ರಸನ್ನ ಕುಮಾರ್ ಮಾತನಾಡಿ, ರಾಜ್ಯದ ಸಮಸ್ಯೆಗೆ ಕೇಂದ್ರದ ಸಹಕಾರ ಸಿಗುತ್ತಿಲ್ಲ. ಭದ್ರಾವತಿ ಉಕ್ಕು, ಪೇಪರ್ ಕಾರ್ಖಾನೆ ದುಸ್ಥಿತಿಯಲ್ಲಿದೆ. ಇದರ ಪುನಶ್ಚೇತನಕ್ಕೆ ಸಿಎಂ ಹಣ ಕೊಡುತ್ತಾರೆ ಎಂದುಕೊಂಡಿದ್ದೆ ಆದ್ರೆ ಕೊಟ್ಟಿಲ್ಲ. ಮುದ್ರಾಂಕ ಶುಲ್ಕ ಸಂಗ್ರಹ 5 ಸಾವಿರ ಕೋಟಿ ಕೊರತೆಯಾಗಿದೆ. ಇಲ್ಲಿರುವ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಸರಿಯಾಗಿ ನಡೆಸದೇ ಸಮಸ್ಯೆ ಹೆಚ್ಚಾಗಿದೆ. ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸರಿಯಿಲ್ಲ. ಇತ್ತ ಕಡೆ ಸಿಎಂ ಬಿಎಸ್ವೈ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಸದಸ್ಯ ರಮೇಶ್ ಗೌಡ ಮಾತನಾಡಿ, ಜಿಎಸ್ಟಿ ಕಾಯ್ದೆ ಪ್ರಕಾರ ಬರಬೇಕಿರುವ 8 ಸಾವಿರ ಕೋಟಿ ರೂ. ಹಾಗೂ 15ನೇ ಹಣಕಾದು ಆಯೋಗದಿಂದ 10 ರಿಂದ15 ಸಾವಿರ ಕೋಟಿ ರೂ. ಬರುತ್ತಿಲ್ಲ. ಅದನ್ನು ತರಿಸಲು ಮುಂದಾಗಬೇಕು. ಬೆಂಗಳೂರು ನಗರದಲ್ಲಿ ಸಂಚಾರ ಪೊಲೀಸರಿಗೆ ಸಾಕಷ್ಟು ಆಧುನಿಕ ಸೌಲಭ್ಯ ಹಾಗೂ ಸಲಕರಣೆ ಇದೆ. ಅದನ್ನು ಬಳಸಿಕೊಳ್ಳದೇ ನೇರವಾಗಿ ಪೊಲೀಸರು ದಾಳಿ ನಡೆಸುತ್ತಾರೆ ಅದನ್ನು ತಡೆಯಬೇಕು ಎಂದರು.