ಬೆಂಗಳೂರು: ವಿಧಾನ ಪರಿಷತ್ನಲ್ಲಿ ಸಂಖ್ಯಾಬಲದ ಮೇಲೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ, ಜೆಡಿಎಸ್ ಸಾಥ್ ನೀಡಿದ ಹಿನ್ನೆಲೆ ಸಭಾಪತಿ ಆಯ್ಕೆಗೆ ಚುನಾವಣೆ ಎದುರಾಗಿದೆ. ಕಳೆದ ಕೆಲ ದಿನದಿಂದ ಸಭಾಪತಿಗಳಾಗಿದ್ದ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಕೆಳಗಿಳಿಸಲು ನಡೆಯುತ್ತಿದ್ದ ಪ್ರಯತ್ನಕ್ಕೆ ಕಳೆದ ಗುರುವಾರ ಫಲ ಸಿಕ್ಕಿದೆ.
ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಅವರು ಸಭಾಪತಿ ಸ್ಥಾನದಿಂದ ಕೆಳಗಿಳಿದಿದ್ದು, ನೂತನ ಸಭಾಪತಿ ಆಯ್ಕೆಗೆ ಮಂಗಳವಾರ ಚುನಾವಣೆ ನಡೆಯಲಿದೆ. ನಾಳೆ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಜೆಡಿಎಸ್ ವತಿಯಿಂದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅಭ್ಯರ್ಥಿಯಾಗಲಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಬೆಂಬಲದೊಂದಿಗೆ ಉಪ ಸಭಾಪತಿಯನ್ನಾಗಿ ತಮ್ಮ ಪಕ್ಷದ ಸದಸ್ಯ ಪ್ರಾಣೇಶ್ ಅವರನ್ನು ಆಯ್ಕೆ ಮಾಡಿಕೊಂಡಿರುವ ಬಿಜೆಪಿ, ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ಬದಲಾಗಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಲಿದೆ.
ಏಕಾಂಗಿಯಾಗಿ ಸಭಾಪತಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರದ ಬಿಜೆಪಿ, ಇನ್ನೊಂದು ವರ್ಷ ಜೆಡಿಎಸ್ ಜತೆ ಸಖ್ಯ ಬೆಳೆಸಿ ನಂತರ ಸ್ವತಂತ್ರ ಬಲದ ಮೇಲೆ ಸಭಾಪತಿ ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಿದೆ. ಮುಂದಿನ ಜನವರಿ ವೇಳೆಗೆ ಸಾಕಷ್ಟು ಸ್ಥಾನ ಖಾಲಿ ಆಗಲಿದ್ದು, ಆ ವೇಳೆಗೆ ತಾವು ಪೂರ್ಣ ಬಹುಮತ ಹೊಂದಿರುತ್ತೇವೆ ಎನ್ನುವ ವಿಶ್ವಾಸ ಬಿಜೆಪಿಯದ್ದು.
ಕಾಂಗ್ರೆಸ್ ಅಭ್ಯರ್ಥಿ: ಇಂದು ಬೆಂಗಳೂರಿನಲ್ಲಿ ಸಭೆ ನಡೆಸಿರುವ ಕಾಂಗ್ರೆಸ್ ಪಕ್ಷ ಪರಿಷತ್ ಸಭಾಪತಿ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಹಿರಿಯ ಸದಸ್ಯ ನಜೀರ್ ಅಹಮದ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಉಪಸಭಾಪತಿ ಚುನಾವಣೆಯಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ ಸೋತಿತ್ತು. ಈ ಸಾರಿಯೂ ಸೋಲು ನಿರೀಕ್ಷಿತ. ಆದರೆ ಚುನಾವಣೆ ಆಗಲಿ ಎಂಬ ಉದ್ದೇಶದಿಂದ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದೆ ಎನ್ನಲಾಗಿದೆ.
ಸಂಖ್ಯಾಬಲ: ವಿಧಾನ ಪರಿಷತ್ನಲ್ಲಿ ಸದಸ್ಯರ ಸಂಖ್ಯಾಬಲ ಪಕ್ಷವಾರು ಗಮನಿಸಿದಾಗ, ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಒಟ್ಟು 75 ಸದಸ್ಯರ ಬಲದ ಪರಿಷತ್ನಲ್ಲಿ ಸದ್ಯ 74 ಸದಸ್ಯರಿದ್ದು, ಪಕ್ಷೇತರ ಸದಸ್ಯರೊಬ್ಬರ ಬೆಂಬಲ ಸೇರಿ ಒಟ್ಟು 32 ಸದಸ್ಯರ ಬಲವನ್ನು ಬಿಜೆಪಿ ಹೊಂದಿದೆ. ಎರಡನೇ ದೊಡ್ಡ ಪಕ್ಷ ಕಾಂಗ್ರೆಸ್, ಇದು 29 ಸದಸ್ಯರ ಬಲ ಹೊಂದಿದೆ. ಜೆಡಿಎಸ್ 13 ಸದಸ್ಯರನ್ನು ಒಳಗೊಂಡಿದೆ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಉಪಸಭಾಪತಿ ಧರ್ಮೇಗೌಡ ಜೆಡಿಎಸ್ ಸದಸ್ಯರಾಗಿದ್ದರು. ಇವರ ನಿಧನದಿಂದ ತೆರವಾದ ಸ್ಥಾನಕ್ಕೆ ಆಯ್ಕೆ ನಡೆಯಬೇಕಿದೆ.
ಸದ್ಯ 74 ಸದಸ್ಯರನ್ನು ಹೊಂದಿರುವ ಪರಿಷತ್ನಲ್ಲಿ ಬಹುಮತ ಸಾಬೀತುಪಡಿಸಲು 38 ಸದಸ್ಯರ ಬಲದ ಅಗತ್ಯವಿದೆ. ಬಿಜೆಪಿಯ 32 ಸದಸ್ಯರ ಜತೆ ಜೆಡಿಎಸ್ನ 13 ಸದಸ್ಯರು ಬೆಂಬಲ ಸೂಚಿಸಿದರೆ, ಅಲ್ಲಿಗೆ 45 ಸದಸ್ಯರ ಬಲದೊಂದಿಗೆ ಸಭಾಪತಿ ಆಯ್ಕೆ ಆಗಲಿದೆ. ಕಾಂಗ್ರೆಸ್ ಲೆಕ್ಕಕ್ಕೆ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿದೆ.
ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆಯಿಂದ ತೆರವಾಗಿದ್ದ ಸಭಾಪತಿ ಹುದ್ದೆಗೆ ಬರುವ ಮಂಗಳವಾರ ಚುನಾವಣೆ ನಡೆಯಲಿದೆ. ಫೆಬ್ರವರಿ 8ನೇ ತಾರೀಖು ಸೋಮವಾರ ನಾಮಪತ್ರ ಸಲ್ಲಿಕೆಯ ದಿನವಾಗಿದ್ದು, ಮಂಗಳವಾರ ಚುನಾವಣೆಯನ್ನು ನಿಗದಿಪಡಿಸಿ ರಾಜ್ಯಪಾಲರು ಆದೇಶಿಸಿದ್ದಾರೆ. ಈ ಚುನಾವಣೆ ನಡೆಸುವ ಉದ್ದೇಶಕ್ಕಾಗಿಯೇ ಸೋಮವಾರದಿಂದ ಬುಧವಾರದವರೆಗೆ ವಿಧಾನ ಪರಿಷತ್ ಕಲಾಪವನ್ನು ವಿಸ್ತರಿಸಲಾಗಿದೆ.
ಇಲ್ಲವಾದರೆ ವಿಧಾನಸಭೆ ಜತೆ ಇದೂ ಸಹ ಶುಕ್ರವಾರ ಅನಿರ್ದಿಷ್ಟ ಕಾಲಾವಧಿಗೆ ಮುಂದೂಡಿಕೆಯಾಗಬೇಕಿತ್ತು. ಬಜೆಟ್ ಅಧಿವೇಶನಕ್ಕೆ ಮರು ಸಮಾವೇಶಗೊಳ್ಳಬೇಕಿತ್ತು. ಆದರೆ ಬಜೆಟ್ ಅಧಿವೇಶನಕ್ಕೆ ಹೊಸ ಸಭಾಪತಿ ಆಯ್ಕೆ ಮಾಡುವ ಹಾಗೂ ಅತ್ಯಂತ ಮಹತ್ವದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಪರಿಷತ್ನಲ್ಲಿ ಪಾಸ್ ಮಾಡಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ಕಲಾಪವನ್ನು ಮುಂದೂಡಿಕೆ ಮಾಡಿಕೊಂಡಿದೆ.