ಬೆಂಗಳೂರು: ಕೊರೊನಾ ಅಟ್ಟಹಾಸದಿಂದ ಇಷ್ಟು ದಿನ ತಣ್ಣಗಿದ್ದ ರಾಜ್ಯ ರಾಜಕಾರಣದ ಚಟುವಟಿಕೆ, ಇದೀಗ ಬಿರುಸುಗೊಳ್ಳುತ್ತಿದೆ. ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಮತ್ತು ರಾಜ್ಯಸಭೆಯ 4 ಸ್ಥಾನಗಳಿಗೆ ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಯಬಹುದಾದ ಚುನಾವಣೆಗೆ, ಅಗತ್ಯ ಮತಗಳ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
ಇದಕ್ಕಾಗಿ ಅಭ್ಯರ್ಥಿಗಳ ಹುಡುಕಾಟದ ಬಗ್ಗೆ ಮೂರು ಪಕ್ಷಗಳಲ್ಲಿ ಚರ್ಚೆಗಳು ಪ್ರಾರಂಭಗೊಂಡಿವೆ. ಪರಿಷತ್ ಚುನಾವಣೆಯನ್ನು ಮುಂದೂಡುವ ಚಿಂತನೆಯನ್ನು ಚುನಾವಣಾ ಆಯೋಗ ಕೈ ಬಿಟ್ಟು, ನಿಗದಿತ ಸಮಯದಲ್ಲಿಯೇ ನಡೆಸುವ ಸಾಧ್ಯತೆಯಿದೆ. ಇದರಿಂದಾಗಿ ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ಅಗತ್ಯ ಮತಗಳ ಬಗ್ಗೆ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿ ಬಂದಿವೆ.
ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಲು ಪ್ರತಿ ಅಭ್ಯರ್ಥಿಗೆ 28 ಮತಗಳ ಅಗತ್ಯವಿದ್ದರೆ, ರಾಜ್ಯಸಭೆಗೆ ಆಯ್ಕೆಯಾಗಲು ಪ್ರತಿ ಅಭ್ಯರ್ಥಿಗೆ 45 ಮತಗಳು ಅವಶ್ಯಕತೆಯಿದೆ. ವಿಧಾನಸಭೆಯಿಂದ, ವಿಧಾನ ಪರಿಷತ್ಗೆ ಜೂನ್ ತಿಂಗಳ ಅಂತ್ಯದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು 'ಈಟಿವಿ ಭಾರತ'ಕ್ಕೆ ತಿಳಿಸಿವೆ.
ವಿಧಾನಸಭೆಯ ಬಲಾಬಲಗಳ ಪ್ರಕಾರ, ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಒಟ್ಟು 7 ಸದಸ್ಯರು ಆಯ್ಕೆಯಾಗಬಹುದು. ಬಿಜೆಪಿಯಿಂದ 4, ಕಾಂಗ್ರೆಸ್ನಿಂದ 2 ಹಾಗೂ ಜೆಡಿಎಸ್ನಿಂದ ಒಬ್ಬ ಸದಸ್ಯರು ಪರಿಷತ್ಗೆ ಆಯ್ಕೆಯಾಗಲು ಅವಕಾಶವಿದೆ.
ಪ್ರತಿ ಅಭ್ಯರ್ಥಿಗೆ ಗೆಲುವು ಸಾಧಿಸಲು 28 ಮತಗಳ ಅಗತ್ಯತೆಯಿದೆ. ಸದ್ಯದ ರಾಜಕೀಯ ಲೆಕ್ಕಾಚಾರಗಳ ಪ್ರಕಾರ 7 ಸ್ಥಾನಗಳಿಗೆ ಏಳು ಅಭ್ಯರ್ಥಿಗಳು ಮಾತ್ರ ಕಣಕ್ಕಿಳಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಒಂದು ವೇಳೆ ಹೆಚ್ಚುವರಿಯಾಗಿ ಯಾವುದೇ ಪಕ್ಷ ಒಬ್ಬರನ್ನು ಕಣಕ್ಕಿಳಿಸಿದರೂ, ಮತಗಳಿಗಾಗಿ ಗುದ್ದಾಟ ಮಾಡಬೇಕಾಗುತ್ತದೆ.
ಇನ್ನು ಜೆಡಿಎಸ್ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕುಪೇಂದ್ರರೆಡ್ಡಿಯವರ ಅಧಿಕಾರಾವಧಿ ಜೂನ್ 25 ಕ್ಕೆ ಕೊನೆಗೊಳ್ಳಲಿದೆ. ಖಾಲಿಯಾಗಲಿರುವ ಆ ಸ್ಥಾನಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೆಸರು ಕೇಳಿ ಬರುತ್ತಿದೆ. ಆದರೆ ಜೆಡಿಎಸ್ ವರಿಷ್ಠರು ಮಾತ್ರ ಇನ್ನೂ ತಮ್ಮ ಗುಟ್ಟು ಬಿಟ್ಟು ಕೊಟ್ಟಿಲ್ಲ.
ಸದ್ಯ ಜೆಡಿಎಸ್ ಶಾಸಕರ ಬಲ 34 ಇದೆ. ಒಂದು ವೇಳೆ ದೊಡ್ಡಗೌಡರು ರಾಜ್ಯಸಭೆಗೆ ಸ್ಪರ್ಧಿಸಲು ಒಪ್ಪಿದರೆ, ಇನ್ನು 11 ಮತಗಳು ಬೇಕಾಗುತ್ತವೆ. ಹಾಗಾಗಿ ಕಾಂಗ್ರೆಸ್ ಮೊರೆ ಹೋಗ ಬೇಕಾಗುತ್ತದೆ. ಕಾಂಗ್ರೆಸ್ನ ಒಂದು ಬಣ ಗೌಡರ ಸ್ಪರ್ಧೆಗೆ ಒಲವು ತೋರಿಸಿದ್ದು, ಮತ್ತೊಂದು ಬಣ ಆಸಕ್ತಿ ತೋರಿಸಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಒಟ್ಟಾರೆ ವಿಧಾನಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ.