ಬೆಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಯುವತಿಯ ಸೋಗಿನಲ್ಲಿ ನಕಲಿ ಖಾತೆ ತೆರೆದು, ಮಾಡೆಲ್ ಮಾಡಿಸುವುದಾಗಿ ಯುವತಿಯರ ಅರೆಬೆತ್ತಲೆ ಪೋಟೊ, ವಿಡಿಯೋ ಪಡೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯ ಮೊಬೈಲ್ ಪರಿಶೀಲಿಸಿದ ಪೊಲೀಸರು ದಂಗಾಗಿದ್ದಾರೆ. ಆರೋಪಿಯು ವಿಕೃತ ಸುಖಕ್ಕಾಗಿ ಯುವತಿಯರ ಖಾಸಗಿ ಫೋಟೊ ಹಾಗೂ ವಿಡಿಯೋ ತರಿಸಿಕೊಳ್ಳುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೂರ್ವ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ ಅವರು, ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಮಾಡೆಲಿಂಗ್ ಆಸಕ್ತ ಯುವತಿಯರನ್ನು ಪುಸಲಾಯಿಸಿ ಅವರಿಂದ ಅರೆಬೆತ್ತಲೆ ವಿಡಿಯೋ ಕಳುಹಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ವರದಿಯಾಗಿತ್ತು. ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಆರೋಪಿ ಪ್ರಪಂಚನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಈತ ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು ಯುವತಿಯರನ್ನ ವಂಚಿಸುತ್ತಿದ್ದ, ಹಲವರಿಗೆ ಬೇರೆ ಬೇರೆ ರೀತಿಯಲ್ಲಿ ತನ್ನನ್ನು ಪರಿಚಯಿಸಿಕೊಂಡಿದ್ದ. ಕೆಲವರಿಗೆ ಮಾಡೆಲ್ ಮಾಡುವಾಸೆ ತೋರಿಸಿದ್ದ, ಮತ್ತೆ ಕೆಲವರಿಗೆ ಸಲಿಂಗಕಾಮಿ ಎಂದು ಪರಿಚಯಿಸಿಕೊಂಡಿದ್ದ ಎಂದರು.
ಮಾಡೆಲ್ ಮಾಡುವ ಆಸೆ ತೋರಿಸಿ ನಗ್ನ ಫೋಟೊ, ವಿಡಿಯೋಗಳನ್ನು ತರಿಸಿಕೊಳ್ಳುತ್ತಿದ್ದ. ಅರೆಬೆತ್ತಲೆ ಫೋಟೊ ಕಳಿಸುವವರಿಗೆ ಹಣ ಕೂಡ ನೀಡುತ್ತಿದ್ದ. ಅವರು ಆರೋಪಿಯನ್ನು ಬ್ಲಾಕ್ ಮಾಡಿದರೆ ಮತ್ತೆ ಬೇರೆ ಖಾತೆ ತೆರೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಆರೋಪಿಯಿಂದ ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಆರೋಪಿ ಪ್ರಪಂಚನ್ ಕಳೆದ ಎರಡು ವರ್ಷಗಳಿಂದ ಇದೇ ಕೆಲಸ ಮಾಡುತ್ತ ಬಂದಿದ್ದು, ನಾಲ್ಕೈದು ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದ ಎಂಬುದು ಗೊತ್ತಾಗಿದೆ. ಸುಮಾರು 1,000ಕ್ಕೂ ಹೆಚ್ಚು ಖಾಸಗಿ ಫೋಟೋಗಳು ಹಾಗೂ 300ರಿಂದ 400 ವಿಡಿಯೋಗಳು ಪತ್ತೆಯಾಗಿವೆ ಎಂದು ಡಿಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: ನಕಲಿ ಜಾಲತಾಣ ಖಾತೆ.. ಮಾಡೆಲಿಂಗ್ ಹೆಸರಲ್ಲಿ ಫೋಟೋ ಪಡೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದವನ ಬಂಧನ