ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಬಸ್ ಬಂದ್ ಅಂತ್ಯಗೊಳಿಸುವ ಆಸಕ್ತಿಯೇ ಕಾಣುತ್ತಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ಸಾರಿಗೆ ನೌಕರರ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ಸರ್ಕಾರಕ್ಕೆ ಬಸ್ ಬಂದ್ ಅಂತ್ಯಗೊಳಿಸುವ ಉದ್ದೇಶವೇ ಇದ್ದಂತಿಲ್ಲ. ಇದುವರೆಗೂ ಒಂದು ಬಾರಿಯೂ ಪ್ರತಿಭಟನಾನಿರತರ ಜತೆ ಮಾತುಕತೆ ನಡೆಸುವ ಪ್ರಯತ್ನವನ್ನೂ ಮಾಡಿಲ್ಲ.
ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರೇ ನಿಮ್ಮ ಪ್ರತಿಷ್ಠೆ ಬಿಟ್ಟು ಮೊದಲು ನೌಕರರ ಜತೆಗೆ ಸಭೆ ಮಾಡಿ. ಸಾರಿಗೆ ನೌಕರರ ಜತೆ ಸಭೆ ಮಾಡದಂತೆ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನು ತಡೆದಿರುವವರು ಯಾರು? ಯಾರ ಒತ್ತಡಕ್ಕೆ ಒಳಗಾಗಿ ಸಾರಿಗೆ ಒಕ್ಕೂಟದ ಜತೆ ಮಾತುಕತೆ ನಡೆಸುತ್ತಿಲ್ಲ? ಪ್ರತಿಭಟಿಸೋ ಯಾವುದೇ ನೌಕರರ ಒಕ್ಕೂಟಗಳ ಜತೆ ಮಾತುಕತೆ ನಡೆಸುವುದು ಆಡಳಿತ ನಡೆಸುವವರ ಲಕ್ಷಣ ಎಂದು ವಿವರಿಸಿದ್ದಾರೆ.
ಬಸ್ಗಳಿಲ್ಲದೇ ಜನರ ಪ್ರಯಾಣ ದುಸ್ತರವಾಗಿದೆ. ಈ ಸಮಯ ಬಳಸಿಕೊಂಡು ಖಾಸಗಿ ಬಸ್ ಸಂಸ್ಥೆಗಳು ಜನರ ಸುಲಿಗೆ ಮಾಡುತ್ತಿರುವುದನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಸಾರಿಗೆ ನೌಕರರ ಮುಷ್ಕರ ಮುಂದವರೆಯುವಂತೆ ಮಾಡಿ ಖಾಸಗಿಯವರಿಗೆ ಲಾಭ ಮಾಡಿಕೊಡಲು ನಿಂತಿದೆಯಾ ಈ ಸರ್ಕಾರ? ಬಿ.ಎಸ್.ಯಡಿಯೂರಪ್ಪ ಹಾಗೂ ಲಕ್ಷ್ಮಣ ಸವದಿ ಅವರೇ ನೀವು ಖಾಸಗಿ ಲಾಬಿಗೆ ಮಣಿದಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ನಾಲ್ಕು ದಿನಗಳಿಂದ ರಾಜ್ಯದ ಜನ ಬಸ್ಗಳಿಲ್ಲದೇ ಪರದಾಡುತ್ತಿದ್ದಾರೆ. ನಿಮ್ಮ ಪ್ರತಿಷ್ಠೆಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವವರು ಜನಸಾಮನ್ಯರು. ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನರ ಮೇಲೆ ಕಿಂಚಿತ್ ಆದರೂ ಕಾಳಜಿ ಇದ್ದರೆ ಕೂಡಲೇ ಸಮಸ್ಯೆ ಪರಿಹಾರಕ್ಕೆ ಯತ್ನಿಸಿ, ಬಸ್ ಬಂದ್ನಿಂದ ರಾಜ್ಯದ ಜನರನ್ನು ಮುಕ್ತಗೊಳಿಸಿ ಎಂದಿದ್ದಾರೆ.
ದೊರೆಸ್ವಾಮಿಗೆ ಶುಭಾಶಯ
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. ದೊರೆಸ್ವಾಮಿ ಅವರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಇಂದಿಗೂ ಪ್ರಸ್ತುತ ಹೋರಾಟಗಳಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದಾರೆ. ಕ್ರಿಯಾಶೀಲ ಹಿರಿಯ ವ್ಯಕ್ತಿತ್ವವಾಗಿರುವ ದೊರೆಸ್ವಾಮಿ ಅವರಿಗೆ ದೇವರು ಆಯುರಾರೋಗ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಎರಡನೇ ಬಾರಿಗೆ ಕೊರೊನಾ ಸೋಂಕಿಗೀಡಾಗಿದ್ದಾರೆ. ಗೋವಿಂದ ಕಾರಜೋಳ ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.