ಬೆಂಗಳೂರು: ವಿಧಾನ ಪರಿಷತ್ ಕಲಾಪದಿಂದ ಮುಖ್ಯಮಂತ್ರಿಗಳು ದೂರ ಉಳಿಯಬಾರದು, ಸಿಎಂಗೆ ಕೇಳಿದ ಪ್ರಶ್ನೆಗೆ ಅವರೇ ಉತ್ತರ ನೀಡಬೇಕು. ಯಾವ ಸಚಿವರಿಗೆ ಪ್ರಶ್ನೆ ಕೇಳಲಾಗಿರುತ್ತದೆಯೋ ಆ ಸಚಿವರೇ ಉತ್ತರ ನೀಡುವಂತೆ ನೋಡಿಕೊಳ್ಳಬೇಕು ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಸಭಾಪತಿ ಬಸವರಾಜ ಹೊರಟ್ಟಿ ನಿರ್ದೇಶನ ನೀಡಿದ್ದಾರೆ.
ಓದಿ: ಸಂಗಮೇಶ್ ಯಾಕೆ ಶರ್ಟ್ ಬಿಚ್ಚಿದ್ರು ಅನ್ನೋದನ್ನು ಸ್ಪೀಕರ್ ಅರ್ಥ ಮಾಡ್ಕೋಬೇಕಿತ್ತು: ರಾಮಲಿಂಗಾ ರೆಡ್ಡಿ
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ನಿಯಮ 330ರ ಅಡಿ ಕೆಲವು ಹಾಗು ಗಮನ ಸೆಳೆಯುವ ಮೂರು ಸೂಚನೆಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉತ್ತರಿಸಬೇಕಿದ್ದರೂ ಸದನಕ್ಕೆ ಆಗಮಿಸಿರಲಿಲ್ಲ. ಸಿಎಂ ಬದಲು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಉತ್ತರ ನೀಡಿದರು.
ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಇಂಧನ ಇಲಾಖೆ ಅಧೀನದ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣಕ್ಕೆ ಕಾರಣವೇನು?. ಉದ್ದೇಶ ಏನು?. ಏನು ತೊಂದರೆ ಆಗಿದೆ ಎಂದು ಕೇಳಿದ ಪ್ರಶ್ನೆಗೆ ಸಿಎಂ ಪರ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಲು ಮುಂದಾದಾಗ ಪ್ರಶ್ನೆ ಕೇಳಿದ ಸದಸ್ಯ ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲಾ ಪ್ರಶ್ನೆಗೆ ಸಿಎಂ ಪರವಾಗಿ ಕೋಟ ಶ್ರೀನಿವಾಸ ಪೂಜಾರಿ ಉತ್ತರ ನೀಡುತ್ತಿದ್ದಕ್ಕೆ ಪ್ರತಿಪಕ್ಷ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಸಿಎಂ ಒಮ್ಮೆಯೂ ಪರಿಷತ್ ಗೆ ಬಂದಿಲ್ಲ. ಈ ಸದನಕ್ಕೆ ಬೆಲೆ ಇಲ್ಲವಾ ಎಂದು ಪ್ರಶ್ನಿಸಿದರು. ಎಲ್ಲ ಕೇಳಿಸಿಕೊಂಡು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ಎನ್ನುವ ಉತ್ತರಕ್ಕಾಗಿ ನಾವು ಪ್ರಶ್ನೆ ಕೇಳುವುದಿಲ್ಲ ಎಂದು ಪ್ರತಾಪ್ ಚಂದ್ರ ಶೆಟ್ಟಿ ಅಸಮಾಧಾನ ಹೊರಹಾಕಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ ಸಿಎಂ ಮುಂದಿನ ದಿನಗಳಲ್ಲಿ ಅವರಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದಲ್ಲಿ ಅವರೇ ಬಂದು ಉತ್ತರ ಕೊಡಲಿ. ಹಾಗೆಯೇ ಆಯಾ ಸಚಿವರ ಪ್ರಶ್ನೆಗೆ ಆಯಾ ಸಚಿವರೇ ಉತ್ತರ ಅವರೇ ಕೊಡಬೇಕು ಇದನ್ನು ನೀವೇ ವ್ಯವಸ್ಥಿತವಾಗಿ ನೋಡಿಕೊಳ್ಳಬೇಕು ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಸೂಚನೆ ನೀಡದರು. ನಂತರ ಪ್ರತಾಪ್ ಚಂದ್ರ ಶೆಟ್ಟಿ ಪ್ರಶ್ನೆಗೆ ಮುಂದಿನ ವಾರ ಸಿಎಂ ಯಡಿಯೂರಪ್ಪ ಅವರೇ ಉತ್ತರ ಕೊಡಲಿ ಎಂದು ರೂಲಿಂಗ್ ನೀಡಿದರು.
ಸದನದಲ್ಲಿ ಇರಬೇಕಾದ ಸಚಿವರು:
ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಆರ್.ಅಶೋಕ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಆರ್.ಶಂಕರ್, ಶ್ರೀಮಂತ ಪಾಟೀಲ್, ಆನಂದ್ ಸಿಂಗ್ ಅವರು ವಿಧಾನ ಪರಿಷತ್ ಕಲಾಪದಲ್ಲಿ ಕಡ್ಡಾಯವಾಗಿ ಇರಬೇಕು. ಇವರೆಲ್ಲಾ ಇರುವಂತೆ ನೋಡಿಕೊಳ್ಳಿ ಎಂದು ಸಭಾನಾಯಕರಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದರು.